
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಶನಿವಾರ ಭಾರತ-ಫ್ರಾನ್ಸ್ ಸಂಬಂಧಗಳನ್ನು 'ಸಕಾರಾತ್ಮಕವಾಗಿ' ನಿರ್ಣಯಿಸುವುದರ ಜೊತೆಗೆ ಉಕ್ರೇನ್ ಸಂಘರ್ಷವನ್ನು ಶೀಘ್ರವಾಗಿ ಕೊನೆಗೊಳಿಸಲು ನಡೆಯುತ್ತಿರುವ ಪ್ರಯತ್ನಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.
ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸಲು ಅಮೆರಿಕದ ಹೊಸ ಉಪಕ್ರಮಗಳ ನಡುವೆಯೇ ಉಭಯ ನಾಯಕರು ಫೋನ್ ಸಂಭಾಷಣೆ ನಡೆಸಿದ್ದಾರೆ. ಕಳೆದ ತಿಂಗಳು ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗಿನ ಮಾತುಕತೆ ನಡೆಸಿದ ಸಮಯದಲ್ಲಿ ಉಪಸ್ಥಿತರಿದ್ದ ನಾಯಕರ ಪೈಕಿ ಮ್ಯಾಕ್ರನ್ ಸಹ ಇದ್ದರು.
"ಅಧ್ಯಕ್ಷ ಮ್ಯಾಕ್ರನ್ ಅವರೊಂದಿಗೆ ಉತ್ತಮ ಸಂಭಾಷಣೆ ನಡೆಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರದಲ್ಲಿನ ಪ್ರಗತಿಯನ್ನು ನಾವು ಪರಿಶೀಲಿಸಿದ್ದೇವೆ ಮತ್ತು ಸಕಾರಾತ್ಮಕವಾಗಿ ನಿರ್ಣಯಿಸಿದ್ದೇವೆ" ಎಂದು ಮೋದಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
"ಉಕ್ರೇನ್‌ನಲ್ಲಿನ ಸಂಘರ್ಷವನ್ನು ಶೀಘ್ರವಾಗಿ ಕೊನೆಗೊಳಿಸುವ ಪ್ರಯತ್ನಗಳು ಸೇರಿದಂತೆ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ. ಜಾಗತಿಕ ಶಾಂತಿ ಮತ್ತು ಸ್ಥಿರತೆಯನ್ನು ಬೆಳೆಸುವಲ್ಲಿ ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆ ಪ್ರಮುಖ ಪಾತ್ರ ವಹಿಸುತ್ತದೆ" ಎಂದು ಅವರು ಹೇಳಿದರು.
ವಾಷಿಂಗ್ಟನ್‌ನ ಸುಂಕ ನೀತಿಯ ಪರಿಣಾಮಗಳು ಮೋದಿ-ಮ್ಯಾಕ್ರನ್ ಸಂಭಾಷಣೆಯಲ್ಲಿ ಕಾಣಿಸಿಕೊಂಡಿವೆಯೇ ಎಂಬುದು ಈ ವರೆಗೆ ಸ್ಪಷ್ಟವಾಗಿಲ್ಲ.
Advertisement