Manipur visit: ಪ್ರಧಾನಿ ಮೋದಿಯ ಮೂರು ಗಂಟೆಯ ಮಣಿಪುರ ಭೇಟಿ, ಅಲ್ಲಿನ ಜನರಿಗೆ ಮಾಡುವ ಅವಮಾನ; ಕಾಂಗ್ರೆಸ್ ಕಿಡಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 13 ರಂದು ಮಣಿಪುರಕ್ಕೆ ಭೇಟಿ ನೀಡಲು ಉದ್ದೇಶಿಸಿದ್ದು, ಇದು ಆ ರಾಜ್ಯದ ಜನರಿಗೆ ಮಾಡುವ ಅವಮಾನವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನ ವಿಭಾಗದ ಉಸ್ತುವಾರಿ, ಜೈರಾಮ್ ರಮೇಶ್ ಟೀಕಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಧಾನಿ ಮೋದಿ ಭೇಟಿಯ ಸಿದ್ಧತೆ ಕುರಿತು ವರದಿಯೊಂದನ್ನು ಪೋಸ್ಟ್ ಮಾಡಿರುವ ಜೈರಾಮ್ ರಮೇಶ್, ಇದರಲ್ಲಿ ಪ್ರಧಾನಿ ಮೋದಿ ಕೇವಲ ಮೂರು ಗಂಟೆಗಳ ಕಾಲ ಕಳೆಯುತ್ತಾರೆ ಎಂದು ತೋರುತ್ತಿದೆ ಎಂದು ಹೇಳಿದ್ದಾರೆ.
"ಸೆ.13 ರಂದು ಮಣಿಪುರಕ್ಕೆ ಪ್ರಧಾನಿಯವರ ಉದ್ದೇಶಿತ ಭೇಟಿಯನ್ನು ಅವರ ಚೀರ್‌ಲೀಡರ್‌ಗಳು ಪ್ರಶಂಸಿಸುತ್ತಿದ್ದಾರೆ. ಆದರೆ ಅವರು ರಾಜ್ಯದಲ್ಲಿ ಕೇವಲ 3 ಗಂಟೆಗಳ ಕಾಲ - ಹೌದು, ಕೇವಲ 3 ಗಂಟೆಗಳ ಕಾಲ ಕಳೆಯುತ್ತಿದ್ದಾರೆ ಎಂದು ತೋರುತ್ತಿದೆ. ಅಂತಹ ಧಾವಂತದ ಪ್ರವಾಸದಿಂದ ಅವರು ಏನನ್ನು ಸಾಧಿಸಲು ಆಶಿಸುತ್ತಿದ್ದಾರೆ?" ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಇದು 29 ತಿಂಗಳುಗಳಿಂದ ಅವರಿಗಾಗಿ ಕಾಯುತ್ತಿರುವ ರಾಜ್ಯದ ಜನತೆಗೆ ಮಾಡುವ ಅವಮಾನವಾಗಿದೆ. ಸೆಪ್ಟೆಂಬರ್ 13 ನೇ ತಾರೀಖು ಪ್ರಧಾನಿ ನಿಜವಾಗಿಯೂ ಮಣಿಪುರಕ್ಕೆ ಭೇಟಿ ನೀಡುತ್ತಿಲ್ಲ. ಅವರು ಮತ್ತೊಮ್ಮೆ ಮಣಿಪುರದ ಜನರ ಬಗ್ಗೆ ತಮ್ಮ ನಿಷ್ಠುರತೆ ಮತ್ತು ಸಂವೇದನಾಶೀಲತೆಯನ್ನು ಬಹಿರಂಗಪಡಿಸಿದ್ದಾರೆ" ಎಂದು ಅವರು ಟೀಕಾ ಪ್ರಹಾರ ನಡೆಸಿದ್ದಾರೆ.


