
ಇಂದೋರ್: ಮಧ್ಯಪ್ರದೇಶದ ಇಂದೋರ್‌ನ ದೇವಿ ಅಹಲ್ಯಾ ವಿಶ್ವವಿದ್ಯಾನಿಲಯದಲ್ಲಿ ನಡೆದ ಚರ್ಚಾ ಸ್ಪರ್ಧೆಯಲ್ಲಿ ಮೇಯರ್ ಪುಷ್ಯಮಿತ್ರ ಭಾರ್ಗವ ಅವರ ಪುತ್ರ ಸಂಘಮಿತ್ರ ಭಾರ್ಗವ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಮಾಡಿರುವ ಟೀಕೆ
ಇದೀಗ ರಾಜಕೀಯವಾಗಿಯೂ ತೀವ್ರ ಚರ್ಚೆಯಾಗುತ್ತಿದೆ. ತಮ್ಮ ತಂದೆ ಹಾಗೂ ಮಧ್ಯ ಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಸಮ್ಮುಖದಲ್ಲಿಯೇ ವಿಪಕ್ಷದ ನಾಯಕನಂತೆ ಮಾತನಾಡಿದ್ದಾರೆ.
ಮೊದಲನೇಯದಾಗಿ ಕೇಂದ್ರದ ಬುಲೆಟ್ ರೈಲು ಯೋಜನೆ ವಿರುದ್ಧ ವಾಗ್ದಾಳಿ ನಡೆಸಿದ ಸಂಘಮಿತ್ರ, ಇದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ. ಭೂಸ್ವಾಧೀನದಲ್ಲಿ ಹಗರಣಗಳು ನಡೆದಿವೆ. ಆದರೆ ಸರ್ಕಾರದ ಪವರ್‌ಪಾಯಿಂಟ್ ಪ್ರಸ್ತುತಿ( (presentation)ಹೊರತುಪಡಿಸಿದರೆ ಬುಲೆಟ್ ರೈಲು ಆರಂಭವಾಗಿಯೇ ಇಲ್ಲ ಎಂದು ಟೀಕಿಸಿದ್ದಾರೆ.
ಪ್ರತಿವರ್ಷ ಟಿಕೆಟ್ ಖರೀದಿಸಿದರೂ ವೆಯ್ಟಿಂಗ್ ಲೀಸ್ಟ್ ನಿಂದಾಗಿ ಸುಮಾರು 50 ಲಕ್ಷ ಜನರಿಗೆ ರೈಲಿನಲ್ಲಿ ಪ್ರಯಾಣಿಸಲು ಸಾಧ್ಯವಾಗದ ಸ್ಥಿತಿಯಿದೆ. ದೇಶದ ರೈಲು ವ್ಯವಸ್ಥೆ ಈ ಸ್ಥಿತಿಯಲ್ಲಿರುವಾಗ ಬುಲೆಟ್ ರೈಲಿನ ಮಾತೇಕೆ? ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಭಾಷಣವು ತಕ್ಷಣವೇ ವಿಶ್ವವಿದ್ಯಾಲಯದ ಹೊರಗಡೆಯೂ ಪ್ರತಿಧ್ವನಿಸುತ್ತಿದ್ದು, ರಾಜಕೀಯವಾಗಿ ತೀವ್ರ ಚರ್ಚೆಯಾಗುತ್ತಿದೆ. ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಸಂಘಮಿತ್ರರನ್ನು "ಪ್ರಭಾವಶಾಲಿ ಭಾಷಣಕಾರ" ಎಂದು ಬಣ್ಣಿಸುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಅದನ್ನು ಪೋಸ್ಟ್ ಮಾಡುತ್ತಿದ್ದಾರೆ.
ಚರ್ಚಾಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಮೋಹನ್ ಯಾದವ್ ಕೂಡಾ ಸಂಘಮಿತ್ರ ಅವರ ಭಾಷಣವನ್ನು ಸ್ವಾಗತಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾನು ಆಯ್ದುಕೊಂಡ ವಿಷಯನ್ನು ಹೆದರದೆ ಧೈರ್ಯವಾಗಿ ಸಂಘಮಿತ್ರ ವ್ಯಕ್ತಪಡಿಸಿರುವುದಾಗಿ ಅವರು ಹೊಗಳಿದ್ದಾರೆ.
ಬುಲೆಟ್ ರೈಲು ಯೋಜನೆ ಟೀಕೆಗಷ್ಟೇ ಭಾಷಣ ನಿಲ್ಲಿಸದ ಸಂಘಮಿತ್ರ, ರೈಲಿನಲ್ಲಿ ಸುರಕ್ಷತೆಯ ಶೀಲ್ಡ್ ಎನ್ನಲಾದ ಕವಚ ತಂತ್ರಜ್ಞಾನದ ಬಗ್ಗೆಯೂ ಟೀಕಾ ಪ್ರಹಾರ ನಡೆಸಿದ್ದಾರೆ. ಇಂತಹ ಹೇಳಿಕೆಗಳ ನಡುವೆ ಕಲೆದ ದಶಕದಲ್ಲಿ ರೈಲು ಅಪಘಾತಗಳಲ್ಲಿ 20,000ಕ್ಕೂ ಹೆಚ್ಚು ಮಂದಿ ರೈಲು ಅಫಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ರೈಲುಗಳು ಹಳಿ ತಪ್ಪಿದಾಗ ಬೋಗಿಗಳು ಮುರಿದು ಹೋಗಿರುವುದು ಮಾತ್ರವಲ್ಲದೇ ತಾಯಿಯೊಬ್ಬರು ಮಡಿಲು ಬರಿದಾದಂತೆ, ಒಂದು ಮಗುವಿನ ಭವಿಷ್ಯವನ್ನು ಕತ್ತಲೆಗೆ ನೂಕಿದಂತೆ ಮತ್ತು ವಯಸ್ಸಾದ ತಂದೆ ಕಳೆದುಕೊಂಡಂತೆ ಎಂದು ಸಂಘಮಿತ್ರ ಟೀಕಿಸಿದ್ದಾರೆ.
400 ರೈಲು ನಿಲ್ದಾಣಗಳನ್ನು ವಿಮಾನ ನಿಲ್ದಾಣ ರೀತಿ ಹಬ್ ಮಾಡುವ ಕೇಂದ್ರ ಸರ್ಕಾರದ ಬದ್ಧತೆಯನ್ನು ಅವರು ಟೀಕಿಸಿದ್ದಾರೆ. ಕೇವಲ 20 ನಿಲ್ದಾಣಗಳನ್ನು ಮಾತ್ರ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದ್ದು, ಭರವಸೆ ಹಾಗೂ ಅನುಷ್ಠಾನದ ನಡುವಿನ ವಿಳಂಬದ ಬಗ್ಗೆಯೂ ಕಿಡಿಕಾರಿದ್ದಾರೆ. ಅವರ ತಂದೆ ಪುಷ್ಯಮಿತ್ರ ಭಾರ್ಗವ ಬಿಜೆಪಿಯಿಂದ ರಾಜಕೀಯ ಜೀವನ ಆರಂಭಿಸಿದ್ದು, ಅನೇಕ ನಾಗರಿಕ ಯೋಜನೆಗಳು, ಡಿಜಿಟಲ್ ಆಡಳಿತ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳ ಮೂಲಕ ಇಂದೋರ್ ಗೆ ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಖ್ಯಾತಿ ತಂದುಕೊಟ್ಟಿದ್ದಾರೆ.
ಈ ನಡುವೆ ತನ್ನ ಮಗನ ಭಾಷಣದ ವಿರುದ್ಧ ಯಾವುದೇ ಅಸಮಾಧಾನ ವ್ಯಕ್ತಪಡಿಸಿದ ಮೇಯರ್, ಅದು ಆತನ ಅಭಿಪ್ರಾಯವಾಗಿದೆ. ಸರಿ, ತಪ್ಪುಗಳ ಬಗ್ಗೆ ಆತ ಭಾಷಣ ಮಾಡಿದ್ದು, ಕಾಂಗ್ರೆಸ್ ಯಾವಾಗಲೂ ಕ್ರೀಡೆಯಲ್ಲಿಯೂ ರಾಜಕೀಯ ಮಾಡುತ್ತದೆ ಎಂದು ಟೀಕಿಸಿದ್ದಾರೆ.
Advertisement