
ಇಂಫಾಲ್: ಮಣಿಪುರದಲ್ಲಿ ಮೇ 2023 ರಲ್ಲಿ ಸಂಘರ್ಷ ಭುಗಿಲೆದ್ದ ನಂತರ ಮೊದಲ ಬಾರಿಗೆ ಜನಾಂಗೀಯ ಹಿಂಸಾಚಾರ ಪೀಡಿತ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 13 ರಂದು ಭೇಟಿ ನೀಡುವ ಸಾಧ್ಯತೆ ಇದ್ದು, ಅವರಿಗಾಗಿ ಆಯೋಜಿಸಲಾದ ಸ್ವಾಗತ ಸಮಾರಂಭವನ್ನು ಕುಕಿ-ಜೋ ಸಮುದಾಯವನ್ನು ಪ್ರತಿನಿಧಿಸುವ ಹಲವಾರು ಸಂಘಟನೆಗಳು ಬುಧವಾರ ತೀವ್ರ ವಿರೋಧಿಸಿವೆ.
ಇಂಫಾಲ್ ಹಮರ್ ನಿರಾಶ್ರಿತ ಸಮಿತಿಯು, ಪ್ರಧಾನಿ ಮೋದಿ ಅವರು ಸ್ವಾಗತ ಸಮಾರಂಭದಲ್ಲಿ ಭಾಗವಹಿಸುವ ಬದಲು ಜನಾಂಗೀಯ ಹಿಂಸಾಚಾರ ಪೀಡಿತರೊಂದಿಗೆ ಮಾತುಕತೆ ನಡೆಸಬೇಕು ಎಂದು ಹೇಳಿದೆ.
ಚುರಾಚಂದ್‌ಪುರ ಜಿಲ್ಲೆಯ ಗ್ಯಾಂಗ್ಟೆ ವಿದ್ಯಾರ್ಥಿ ಸಂಘಟನೆಯು, ಪ್ರಧಾನಿಯವರ ಸಂಭಾವ್ಯ ಭೇಟಿಯನ್ನು ಸ್ವಾಗತಿಸುವುದಾಗಿ ಹೇಳಿದೆ. ಆದರೆ "ನಾವು ನಮ್ಮ ಕಣ್ಣುಗಳಲ್ಲಿ ನೀರು ತುಂಬಿಕೊಂಡು, ಕಣ್ಣೀರಿನೊಂದಿಗೆ ನೃತ್ಯ ಮಾಡಲು ಸಾಧ್ಯವಿಲ್ಲ!" "ನಮ್ಮ ಶೋಕ ಇನ್ನೂ ಮುಗಿದಿಲ್ಲ. ನಮ್ಮ ಕಣ್ಣೀರು ಇನ್ನೂ ಒಣಗಿಲ್ಲ. ನಮ್ಮ ಗಾಯಗಳು ಇನ್ನೂ ವಾಸಿಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಸಂತೋಷದಿಂದ ನೃತ್ಯ ಮಾಡಲು ಸಾಧ್ಯವಿಲ್ಲ" ಎಂದು ಇಂಫಾಲ್ ಹಮರ್ ನಿರಾಶ್ರಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಭವ್ಯ ಸ್ವಾಗತ ಸಮಾರಂಭದಲ್ಲಿ ಭಾಗವಹಿಸುವ ಬದಲು, ಪರಿಹಾರ ಶಿಬಿರಗಳಲ್ಲಿ ನೆಲೆಸಿರುವ ಸ್ಥಳಾಂತರಗೊಂಡ ಜನರೊಂದಿಗೆ ಪ್ರಧಾನಿ ಮಾತುಕತೆ ನಡೆಸಬೇಕು ಎಂದು ಸಮಿತಿ ಹೇಳಿದೆ.
ಆದಾಗ್ಯೂ, ಚುರಚಂದ್‌ಪುರ ಮೂಲದ ವಿದ್ಯಾರ್ಥಿ ಸಂಘಟನೆಯು, ಪ್ರಧಾನಿ ಮೋದಿಯ ಭೇಟಿಯು ಜನಾಂಗೀಯ ಹಿಂಸಾಚಾರದಿಂದ ಬಳಲುತ್ತಿರುವ ಜನ ತಮ್ಮ ಗಾಯಗಳನ್ನು ಗುಣಪಡಿಸಲು ಮತ್ತು ಕುಂದುಕೊರತೆಗಳನ್ನು ವ್ಯಕ್ತಪಡಿಸಲು ಸಹಾಯ ಮಾಡುತ್ತದೆ ಎಂದು ಹೇಳಿಕೊಂಡಿದೆ.
ಕುಕಿ ಸಮುದಾಯದ ಸರ್ವೋಚ್ಚ ಸಂಸ್ಥೆಯಾದ ಕುಕಿ ಇನ್ಪಿ ಮಣಿಪುರ, ಪ್ರಧಾನಿ ಮೋದಿಯನ್ನು ರಾಜ್ಯದಲ್ಲಿ ಸ್ವಾಗತಿಸಬೇಕು. ಆದರೆ ಈ ಭೇಟಿಯು ನಮಗೆ "ನ್ಯಾಯ ಒದಗಿಸಬೇಕು ಮತ್ತು ಕುಕಿ-ಜೋ ಜನರ ಸಾಮೂಹಿಕ ಆಕಾಂಕ್ಷೆಗಳನ್ನು ಗುರುತಿಸಬೇಕು" ಎಂದು ಒತ್ತಿ ಹೇಳಿದೆ.
Advertisement