
ಅಹಮದಾಬಾದ್: ಗುಜರಾತ್‌ನ ಪಾಟೀದಾರ್ ಮೀಸಲಾತಿ ಆಂದೋಲನ ಭೂತ ಮತ್ತೆ ಬಿಜೆಪಿ ಶಾಸಕ ಹಾರ್ದಿಕ್ ಪಟೇಲ್ ಅವರನ್ನು ಕಾಡುತ್ತಿದ್ದು, 2018 ರ ಗಲಭೆ ಪ್ರಕರಣದಲ್ಲಿ ಪಟೇಲ್ ಮತ್ತು ಇತರ ಇಬ್ಬರ ವಿರುದ್ಧ ಅಹಮದಾಬಾದ್ ಗ್ರಾಮೀಣ ನ್ಯಾಯಾಲಯವು ಬುಧವಾರ ಬಂಧನ ವಾರಂಟ್ ಹೊರಡಿಸಿದೆ.
ಪದೇ ಪದೇ ನ್ಯಾಯಾಲಯಕ್ಕೆ ಗೈರು ಹಾಜರಾಗುತ್ತಿರುವ ಹಾರ್ದಿಕ್ ಪಟೇಲ್ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದ್ದು, ಗುಜರಾತ್‌ನಲ್ಲಿ ಕಾನೂನು, ರಾಜಕೀಯ ಮತ್ತು ಸಮುದಾಯದ ಭಾವನೆಗಳ ನಡುವಿನ ತೀವ್ರ ಘರ್ಷಣೆಗೆ ಕಾರಣವಾಗುವ ಸಾಧ್ಯತೆ ಇದೆ.
ಈ ಪ್ರಕರಣವು ಆಗಸ್ಟ್ 2018 ರಲ್ಲಿ ಆರಂಭವಾಗಿದ್ದು, ಆಗ ಪಾಟೀದಾರ್ ಮೀಸಲಾತಿ ಆಂದೋಲನದ ನಾಯಕರಾಗಿದ್ದ ಹಾರ್ದಿಕ್ ತಮ್ಮ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಿದ್ದರು.
ಅಹಮದಾಬಾದ್‌ನ ನಿಕೋಲ್ ಪ್ರದೇಶದಲ್ಲಿ ನಡೆದ ಪ್ರತಿಭಟನೆ ವೇಳೆ ಹಾರ್ದಿಕ್ ಮತ್ತು ಅವರ ಸಹಾಯಕರ ವಿರುದ್ಧ ಗಲಭೆ, ಹಿಂಸಾಚಾರಕ್ಕೆ ಪ್ರಚೋದನೆ ಮತ್ತು ಸಾರ್ವಜನಿಕ ಆಸ್ತಿಗಳ ನಾಶಪಡಿಸಿದ ಪ್ರಕರಣ ದಾಖಲಿಸಲಾಗಿದೆ.
ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಹಾರ್ದಿಕ್ ವಿಚಾರಣೆಗೆ ಹಾಜರಾಗಲು ಪದೇ ಪದೇ ವಿಫಲರಾಗಿದ್ದಾರೆ. ಅವರ ನಿರಂತರ ಗೈರು ಹಾಜರಿಯಿಂದ ಕೋಪಗೊಂಡ ನ್ಯಾಯಾಲಯ, ಅವರನ್ನು ತಕ್ಷಣ ಬಂಧಿಸುವಂತೆ ಆದೇಶಿಸಿದೆ.
ಅಹಮದಾಬಾದ್ ಗ್ರಾಮೀಣ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ತಂಡಗಳನ್ನು ಸಿದ್ಧಪಡಿಸಿದೆ.
Advertisement