
ಶ್ರೀನಗರ: ಆಮ್ ಆದ್ಮಿ ಪಕ್ಷದ(ಎಎಪಿ) ಶಾಸಕ ಮೆಹ್ರಾಜ್ ಮಲಿಕ್ ಅವರ ಬಂಧನ ಖಂಡಿಸಿ ನಡೆದ ಭಾರಿ ಪ್ರತಿಭಟನೆಗಳ ಮಧ್ಯೆ, ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಗುರುವಾರ ಶಂಕಿತ ಸ್ಫೋಟ ಸಂಭವಿಸಿದ್ದು, ಆ ಪ್ರದೇಶದಲ್ಲಿ ಆತಂಕ ಸೃಷ್ಟಿಸಿದೆ ಎಂದು ಪಿಟಿಐ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ದೋಡಾದ ಜಮೈ ಮಸೀದಿ ಬಳಿಯ ದುಮ್ರಿ ಮೊಹಲ್ಲಾದಲ್ಲಿ ಈ ಸ್ಫೋಟ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ತಲುಪಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಸಂಸದ ಸಂಜಯ್ ಸಿಂಗ್ ಮತ್ತು ಜಮ್ಮು ಮತ್ತು ಕಾಶ್ಮೀರ ಉಸ್ತುವಾರಿ ಇಮ್ರಾನ್ ಹುಸೇನ್ ಸೇರಿದಂತೆ ಎಎಪಿ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸದಂತೆ ತಡೆಯಲು ಅಧಿಕಾರಿಗಳು ಅವರನ್ನು ಗೃಹಬಂಧನದಲ್ಲಿ ಇರಿಸಿದ್ದು, ಇದರ ಬೆನ್ನಲ್ಲೇ ಈ ಸ್ಫೋಟ ಸಂಭವಿಸಿದೆ.
ಮಲಿಕ್ ಅವರನ್ನು "ಅಕ್ರಮ"ವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿರುವ ಎಎಪಿ ನಾಯಕರು, ಪಕ್ಷದ ಶಾಸಕನ ಬಂಧನ ಮತ್ತು ಪಿಎಸ್ಎ ಅಡಿಯಲ್ಲಿ ಕೇಸ್ ದಾಖಲು ವಿರುದ್ಧ ಶ್ರೀನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಪ್ರೆಸ್ ಕಾಲೋನಿಯಲ್ಲಿ ಧರಣಿ ನಡೆಸಬೇಕಿತ್ತು.
ಪ್ರತಿಭಟನೆಗಳನ್ನು ತಡೆಯಲು ಅಧಿಕಾರಿಗಳು ಕರ್ಫ್ಯೂ ತರಹದ ನಿರ್ಬಂಧಗಳನ್ನು ವಿಧಿಸಿದ್ದಾರೆ ಮತ್ತು ದೋಡಾದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ.
ದೋಡಾದ ಎಎಪಿ ಶಾಸಕ ಮೆಹ್ರಾಜ್ ಮಲಿಕ್ ಅವರನ್ನು ಸೋಮವಾರ ಬಂಧಿಸಲಾಗಿದ್ದು, ಕಠಿಣ ಪಿಎಸ್ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದು ಎರಡು ವರ್ಷಗಳವರೆಗೆ ವಿಚಾರಣೆಯಿಲ್ಲದೆ ಬಂಧನಕ್ಕೆ ಅವಕಾಶ ನೀಡುತ್ತದೆ.
ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗಜಯ್ ಸಿಂಗ್ ರಾಣಾ ಅವರನ್ನು ಸೋಲಿಸಿ ದೋಡಾ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ ಮಲಿಕ್ ಅವರನ್ನು ಕಥುವಾ ಜಿಲ್ಲಾ ಜೈಲಿನಲ್ಲಿ ಇರಿಸಲಾಗಿದೆ.
Advertisement