
ಗ್ಯಾಂಗ್‌ಟಾಕ್: ನಿರಂತರ ಮಳೆಯಿಂದಾಗಿ ಸಿಕ್ಕಿಂನ ಗ್ಯಾಲ್ಶಿಂಗ್ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ಮನೆ ಮೇಲೆ ಭೂಕುಸಿತ ಸಂಭವಿಸಿದ್ದು, ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಒಂದು ಮಗು ತೀವ್ರವಾಗಿ ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪ್ಪರ್ ರಿಂಬಿ ಪ್ರದೇಶದಲ್ಲಿ ನಿನ್ನೆ ಮಧ್ಯರಾತ್ರಿ ಕುಟುಂಬ ಮನೆಯಲ್ಲಿ ನಿದ್ರಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಭೂಕುಸಿತವು ಮನೆಯನ್ನು ಸಂಪೂರ್ಣವಾಗಿ ನಾಶಪಡಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಸಿಕ್ಕಿಂ ಪೊಲೀಸರು, ಸಶಸ್ತ್ರ ಸೀಮಾ ಬಲ್(ಎಸ್‌ಎಸ್‌ಬಿ) ಸಿಬ್ಬಂದಿ ಮತ್ತು ಸ್ಥಳೀಯ ನಿವಾಸಿಗಳು ನಿರಂತರ ಮಳೆಯ ಹೊರತಾಗಿಯೂ ಘಟನಾ ಸ್ಥಳಕ್ಕೆ ತೆರಳಿ ಕ್ಷಿಪ್ರವಾಗಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಎಂದು ಗ್ಯಾಲ್ಶಿಂಗ್ ಪೊಲೀಸ್ ವರಿಷ್ಠಾಧಿಕಾರಿ ತ್ಸೆರಿಂಗ್ ಶೆರ್ಪಾ ಅವರು ತಿಳಿಸಿದ್ದಾರೆ.
"ಆರು ಕುಟುಂಬ ಸದಸ್ಯರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ ಇಬ್ಬರು ಮಹಿಳೆಯರನ್ನು ಗ್ಯಾಲ್ಶಿಂಗ್ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿದರು" ಎಂದು ಶೆರ್ಪಾ ಹೇಳಿದ್ದಾರೆ.
ಅವಶೇಷಗಳಿಂದ ಏಳು ವರ್ಷದ ಬಾಲಕನನ್ನು ಜೀವಂತವಾಗಿ ಹೊರತೆಗೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತಿಕೂಲ ಹವಾಮಾನದ ಹೊರತಾಗಿಯೂ, ಸ್ಥಳೀಯ ಸಮುದಾಯದ ಬೆಂಬಲದೊಂದಿಗೆ ರಕ್ಷಣಾ ತಂಡವು ತ್ವರಿತವಾಗಿ ಕಾರ್ಯನಿರ್ವಹಿಸಿತು.
"ಇದು ಅಪಾಯಕಾರಿ ಕಾರ್ಯಾಚರಣೆಯಾಗಿತ್ತು, ಆದರೆ ನಾವು ಜೀವಗಳನ್ನು ಉಳಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ" ಎಂದು ಎಸ್ಪಿ ಶೆರ್ಪಾ ಹೇಳಿದ್ದಾರೆ.
Advertisement