
ಇಂಫಾಲ್: ಈಶಾನ್ಯ ರಾಜ್ಯ ಭೀಕರ ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿ ಎರಡು ವರ್ಷಗಳ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಣಿಪುರಕ್ಕೆ ಭೇಟಿ ನೀಡುತ್ತಿದ್ದು, 8,500 ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಕಿಗಳು ಬಹುಸಂಖ್ಯಾತರಾಗಿರುವ ಚುರಾಚಂದ್‌ಪುರದ ಪೀಸ್ ಗ್ರೌಂಡ್‌ನಲ್ಲಿ ಪ್ರಧಾನಿ ಮೋದಿ ನಾಳೆ 7,300 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ.
ಮೈಟೈ ಬಹುಸಂಖ್ಯಾತ ಇಂಫಾಲ್‌ನಲ್ಲಿ ಒಟ್ಟು 1,200 ಕೋಟಿ ರೂ.ಗಳ ಮೂಲಸೌಕರ್ಯ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಣಿಪುರದಲ್ಲಿ ಹಿಂಸಾಚಾರದಿಂದ ಮೇ 2023 ರಿಂದ ಇದುವರೆಗೆ 260ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಕುಕಿ ಮತ್ತು ಮೈಟೈ ಸಮುದಾಯಗಳ ನಡುವಿನ ಜನಾಂಗೀಯ ಕಲಹದ ನಂತರ ರಾಜ್ಯಕ್ಕೆ ಭೇಟಿ ನೀಡದ ಬಗ್ಗೆ ವಿರೋಧ ಪಕ್ಷಗಳು ಪದೇ ಪದೇ ಟೀಕಿಸುತ್ತಿರುವ ನಡುವೆಯೇ ಪ್ರಧಾನಿ ಮೋದಿ ನಾಳೆ ಭೇಟಿ ನೀಡುತ್ತಿದ್ದಾರೆ.
ಮಣಿಪುರ ಸರ್ಕಾರ ಗುರುವಾರ ಸಂಜೆ ಚುರಾಚಂದ್‌ಪುರದ ಪೀಸ್ ಗ್ರೌಂಡ್ ಮತ್ತು ಇಂಫಾಲ್‌ನ ಕಾಂಗ್ಲಾ ಕೋಟೆಯಲ್ಲಿ ಪ್ರಧಾನಿಯವರ ಕಾರ್ಯಕ್ರಮದ ದೊಡ್ಡ ದೊಡ್ಡ ಜಾಹೀರಾತು ಫಲಕವನ್ನು ಹಾಕಿದೆ. ಇಂಫಾಲ್‌ನ ಪ್ರಮುಖ ಸ್ಥಳವಾದ ಕೀಸಂಪತ್ ಜಂಕ್ಷನ್‌ನಲ್ಲಿ ಈ ಹೋರ್ಡಿಂಗ್ ಕಾಣಿಸಿಕೊಂಡಿದ್ದು, ಇದು ಬಿಜೆಪಿ ರಾಜ್ಯ ಪ್ರಧಾನ ಕಚೇರಿಗೂ ಹತ್ತಿರದಲ್ಲಿದೆ.
ಪೀಸ್ ಗ್ರೌಂಡ್‌ನಲ್ಲಿ ನಡೆಯುವ ವಿವಿಐಪಿ ಕಾರ್ಯಕ್ರಮಕ್ಕೆ ಹಾಜರಾಗುವ ಸಾರ್ವಜನಿಕರು "ಕೀ, ಪೆನ್ನು, ನೀರಿನ ಬಾಟಲಿ, ಬ್ಯಾಗ್, ಕರವಸ್ತ್ರ, ಛತ್ರಿ, ಲೈಟರ್, ಬೆಂಕಿಕಡ್ಡಿ ಪೆಟ್ಟಿಗೆ, ಬಟ್ಟೆಯ ತುಂಡು, ಯಾವುದೇ ಚೂಪಾದ ವಸ್ತುಗಳು ಅಥವಾ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ತರಬಾರದು" ಎಂದು ರಾಜ್ಯ ಸರ್ಕಾರ ಗುರುವಾರ ಮನವಿ ಮಾಡಿದೆ.
ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಿದ ನಂತರ ಫೆಬ್ರವರಿಯಿಂದ ಮಣಿಪುರ ರಾಷ್ಟ್ರಪತಿ ಆಳ್ವಿಕೆಯಲ್ಲಿದೆ.
Advertisement