
ಲಖನೌ: ಪಹಲ್ಗಾಮ್ ಹತ್ಯಾಕಾಂಡದ ಬಲಿಪಶುಗಳಲ್ಲಿ ಒಬ್ಬರಾದ ಶುಭಂ ದ್ವಿವೇದಿ ಅವರ ಪತ್ನಿ ಐಶಾನ್ಯಾ ದ್ವಿವೇದಿ ಅವರು, ಮುಂಬರುವ ಏಷ್ಯಾ ಕಪ್ 2025 ಚಾಂಪಿಯನ್‌ಶಿಪ್ ನಲ್ಲಿ ಭಾರತ-ಪಾಕಿಸ್ತಾನ ಪಂದ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು ಮತ್ತು ಬಿಸಿಸಿಐನ ಈ ನಡೆ ಖಂಡಿಸಿದರು. ಅಲ್ಲದೆ ಎಲ್ಲರೂ ಈ ಪಂದ್ಯವನ್ನು ಬಹಿಷ್ಕರಿಸುವಂತೆ ಒತ್ತಾಯಿಸಿದರು.
ಭಾರತ ಮತ್ತು ಪಾಕಿಸ್ತಾನ ಭಾನುವಾರ ದುಬೈನಲ್ಲಿ ಏಷ್ಯಾ ಕಪ್ ನಲ್ಲಿ ಮುಖಾಮುಖಿಯಾಗಲು ಸಜ್ಜಾಗಿವೆ.
"ಭಯೋತ್ಪಾದಕ ರಾಷ್ಟ್ರ" ಪಾಕಿಸ್ತಾನದ ವಿರುದ್ಧ ಆಡಲು ಒಪ್ಪಿಕೊಂಡಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯನ್ನು ಟೀಕಿಸಿದ ಐಶಾನ್ಯಾ, ಈ ವರ್ಷ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ 26 ಜನರ ತ್ಯಾಗವನ್ನು ಬಿಸಿಸಿಐ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.
"ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಬಿಸಿಸಿಐ ಒಪ್ಪಿಕೊಳ್ಳಬಾರದಿತ್ತು. ಆ 26 ಕುಟುಂಬಗಳ ಬಗ್ಗೆ ಬಿಸಿಸಿಐ ಭಾವನಾತ್ಮಕವಾಗಿಲ್ಲ ಎಂದು ನಾನು ಭಾವಿಸುತ್ತೇನೆ. ನಮ್ಮ ಕ್ರಿಕೆಟಿಗರು ಏನು ಮಾಡುತ್ತಿದ್ದಾರೆ? ಕ್ರಿಕೆಟಿಗರನ್ನು ರಾಷ್ಟ್ರೀಯವಾದಿಗಳು ಎಂದು ಹೇಳಲಾಗುತ್ತದೆ. ಇದನ್ನು ನಮ್ಮ ರಾಷ್ಟ್ರೀಯ ಆಟವೆಂದು ನೋಡಲಾಗುತ್ತದೆ. 1-2 ಕ್ರಿಕೆಟ್ ಆಟಗಾರರನ್ನು ಹೊರತುಪಡಿಸಿ, ಉಳಿದವರು ಯಾರೂ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಬೇಕೆಂದು ಮುಂದೆ ಬರಲಿಲ್ಲ. ಬಿಸಿಸಿಐ ಸಹ ನಮ್ಮ ದೇಶದ ಪರವಾಗಿ ನಿಲುವು ತೆಗೆದುಕೊಳ್ಳಬೇಕು. ಆದರೆ ಅವರು ಹಾಗೆ ಮಾಡುತ್ತಿಲ್ಲ" ಎಂದು ಕಾನ್ಪುರದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ದೇಶಾದ್ಯಂತ ಭಾರತ - ಪಾಕ್ ಪಂದ್ಯ ಬಹಿಷ್ಕಾರಕ್ಕೆ ಕರೆ ನೀಡಿದ ಅವರು, ಅಭಿಮಾನಿಗಳು ನಿಲುವು ತೆಗೆದುಕೊಳ್ಳುವಂತೆ ಒತ್ತಾಯಿಸಿದರು. "ನಿಮ್ಮ ಟಿವಿಗಳನ್ನು ಆನ್ ಮಾಡಬೇಡಿ. ಅವರಿಗೆ ಸಂಖ್ಯೆಗಳನ್ನು ನೀಡಬೇಡಿ. ಈ ಪಂದ್ಯವನ್ನು ಬಹಿಷ್ಕರಿಸಿ" ಎಂದರು.
ಏತನ್ಮಧ್ಯೆ, ಸೆಪ್ಟೆಂಬರ್ 14 ರಂದು ನಿಗದಿಯಾಗಿದ್ದ ಭಾರತ-ಪಾಕಿಸ್ತಾನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದ ಕುರಿತು AIMIM ಮತ್ತು ಶಿವಸೇನೆ (UBT) ಸೇರಿದಂತೆ ವಿರೋಧ ಪಕ್ಷಗಳು ಆಡಳಿತಾರೂಢ ಬಿಜೆಪಿ ಮತ್ತು ಬಿಸಿಸಿಐ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ.
Advertisement