
ಲಕ್ನೋ: ಗ್ರೇಟರ್ ನೋಯ್ಡಾ ಏಸ್ ಸಿಟಿಯಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನ 13 ನೇ ಮಹಡಿಯ ಬಾಲ್ಕನಿಯಿಂದ ಹಾರಿ 37 ವರ್ಷದ ಮಹಿಳೆ ಮತ್ತು ಅವರ 11 ವರ್ಷದ ಮಗ ಶನಿವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಮಗನ ದೀರ್ಘಕಾಲದ ಮಾನಸಿಕ ಅಸ್ವಸ್ಥತೆಯಿಂದ ಬೇಸತ್ತಿದ್ದ ಮಹಿಳೆ ಸಾಕ್ಷಿ ಚಾವ್ಲಾ ತನ್ನ 11 ವರ್ಷ ಮಗನೊಂದಿಗೆ (ಮಗ ದಕ್ಷ) 13ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸೋದಕ್ಕೂ ಮುನ್ನವೇ ಮನೆಯನ್ನ ಶೋಧಿಸಿದ್ದಾರೆ.
ಈ ವೇಳೆ ಮೃತ ಮಹಿಳೆ ಸಾಕ್ಷಿ ಪತಿಗೆ ಬರೆದಿದ್ದ ಡೆತ್‌ನೋಟ್ ಪತ್ತೆಯಾಗಿದೆ. ಇದರಲ್ಲಿ ನಾವು ಈ ಲೋಕವನ್ನು ತೊರೆಯುತ್ತಿದ್ದೇವೆ.. ಕ್ಷಮಿಸಿ… ನಾವು ಇನ್ಮುಂದೆ ನಿಮಗೆ ತೊಂದರೆ ಕೊಡಲು ಬಯಸುವುದಿಲ್ಲ. ನಮ್ಮಿಂದಾಗಿ ನಿಮ್ಮ ಜೀವನ ಹಾಳಾಗಬಾರದು. ನಮ್ಮ ಸಾವಿಗೆ ಯಾರೂ ಕಾರಣವಲ್ಲ ಎಂದು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಸಮಯದಲ್ಲಿ, ಸಾಕ್ಷಿಯ ಪತಿ, ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ದರ್ಪಣ್ ಚಾವ್ಲಾ ಅಪಾರ್ಟ್ಮೆಂಟ್ ಒಳಗೆ ಇದ್ದರು, ಆದರೆ ಇನ್ನೊಂದು ಕೋಣೆಯಲ್ಲಿದ್ದರು. ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಅವರಿಗೆ ಹಠಾತ್ ಕಿರುಚಾಟ ಕೇಳಿಸಿತು ಎಂದು ವರದಿಯಾಗಿದೆ.
ಇದು ಆತ್ಮಹತ್ಯೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಕ್ಷಿ ಅವರ ಮಗ ದಕ್ಷ ಮಾನಸಿಕ ಅಸ್ವಸ್ಥನಾಗಿದ್ದು, ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದ. ಇದರಿಂದಾಗಿ ಶಾಲೆಗೂ ಹೋಗುತ್ತಿರಲಿಲ್ಲ. ವಿಪರೀತ ಔಷಧ ಸೇವಿಸಬೇಕಿತ್ತು. ಇದರಿಂದ ಸಾಕ್ಷಿ ಬಹಳ ನೊಂದಿದ್ದಳು. ತನ್ನ ಕಷ್ಟವನ್ನು ನೆರೆಯವರೊಂದಿಗೆ ಹೇಳಿಕೊಳ್ಳುತ್ತಿದ್ದಳು ಎಂದು ತಿಳಿಸಿದ್ದಾರೆ.
ನಿನ್ನೆ ಬೆಳಗ್ಗೆ 9 ಗಂಟೆ ಸುಮಾರಿಗೆ ಪತಿ ದರ್ಪಣ್ ಚಾವ್ಲಾ, ಹೆಂಡತಿಯನ್ನ ಎಬ್ಬಿಸಿ ಮಗನಿಗೆ ಔಷಧಿ ಕೊಡುವಂತೆ ಹೇಳಿದ್ದರು. ಅದರಂತೆ ಔಷಧಿ ಕೊಟ್ಟು ಬಳಿಕ ಮಗನನ್ನ ಬಾಲ್ಕನಿಗೆ ವಾಕಿಂಗ್‌ಗೆ ಕರೆದೊಯ್ದಿದ್ದಳು ಸಾಕ್ಷಿ. ಇದಾದ ಕೆಲವೇ ಕ್ಷಣಗಳಲ್ಲಿ ಇಬ್ಬರು 13ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ. ಈ ದುರಂತವು ನೆರೆಹೊರೆಯವರನ್ನೂ ಬೆಚ್ಚಿಬೀಳಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
Advertisement