
ಬಿರ್ಭುಮ್: ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯಲ್ಲಿ ಸುಮಾರು ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಶಾಲಾ ಬಾಲಕಿಯ ವಿರೂಪಗೊಂಡ ಮೃತದೇಹ ಗೋಣಿಚೀಲದಲ್ಲಿ ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಬಾಲಕಿ ಓದುತ್ತಿದ್ದ ಶಾಲೆಯ ಶಿಕ್ಷಕನನ್ನು ಬಂಧಿಸಿ, ವಿಚಾರಣೆ ನಡೆಸಿದ ನಂತರ, ಕಾಳಿದಂಗ ಗ್ರಾಮದಿಂದ ಪೊಲೀಸರು ಗೋಣಿಚೀಲದಲ್ಲಿದ್ದ ಬಾಲಕಿಯ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
"ಆಗಸ್ಟ್ 22 ರಂದು ಬೆಳಗ್ಗೆ ಶಾಲೆಗೆ ಹೋದ ನಂತರ ಬಾಲಕಿ ಕಾಣೆಯಾಗಿದ್ದಳು. ವ್ಯಾಪಕ ಹುಡುಕಾಟದ ಹೊರತಾಗಿಯೂ ಆಕೆ ಪತ್ತೆಯಾಗಿರಲಿಲ್ಲ. ನಿನ್ನೆ ರಾತ್ರಿ ಕಾಳಿದಂಗ ಗ್ರಾಮದ ನಿರ್ಜನ ಸ್ಥಳದಲ್ಲಿ ನಾವು ಒಂದು ಗೋಣಿಚೀಲವನ್ನು ಕಂಡೆವು. ಆ ಗೋಣಿಚೀಲದೊಳಗೆ, ಅಪ್ರಾಪ್ತ ಬಾಲಕಿಯ ವಿರೂಪಗೊಂಡ ಮೃತದೇಹ ಪತ್ತೆಯಾಗಿದೆ" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
"ಶಿಕ್ಷಕ ತಮ್ಮ ಮಗಳನ್ನು ಹಲವಾರು ಬಾರಿ ಅನುಚಿತವಾಗಿ ಸ್ಪರ್ಶಿಸುತ್ತಿದ್ದ ಎಂದು ಆರೋಪಿಸಿ ಬಾಲಕಿಯ ಪೋಷಕರು ದೂರು ದಾಖಲಿಸಿದ್ದಾರೆ.
ಶಿಕ್ಷಕ ತನ್ನೊಂದಿಗೆ ಕೆಟ್ಟದಾಗಿ ವರ್ತಿಸುತ್ತಿರುವ ಬಗ್ಗೆ ಅಪ್ರಾಪ್ತ ಬಾಲಕಿ ಈ ಹಿಂದೆ ತನ್ನ ತಾಯಿಗೆ ತಿಳಿಸಿದ್ದಳು ಮತ್ತು ಆಕೆ ಕಾಣೆಯಾದ ನಂತರ, ಅಪ್ರಾಪ್ತ ಬಾಲಕಿಯ ತಾಯಿ ಪೊಲೀಸರಿಗೆ ಮೌಖಿಕವಾಗಿ ಮಾಹಿತಿ ನೀಡಿದ್ದರು.
"ಬಾಲಕಿ ನಾಪತ್ತೆ ಹಿಂದೆ ಶಿಕ್ಷಕನ ಪಾತ್ರವನ್ನು ಶಂಕಿಸಿ, ನಾವು ಶಿಕ್ಷಕನನ್ನು ಬಂಧಿಸಿದ್ದೇವೆ ಮತ್ತು ದೀರ್ಘಕಾಲದವರೆಗೆ ವಿಚಾರಣೆ ನಡೆಸಿದ ನಂತರ, ಆರೋಪಿ, ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ" ಎಂದು ಅವರು ಹೇಳಿದ್ದಾರೆ.
ಕೊಲೆ ಮಾಡುವ ಮೊದಲು ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Advertisement