
ನವದೆಹಲಿ: ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರಕ್ಕೆ ಭಾರತ ಸಾಧ್ಯವಿರುವ ಎಲ್ಲಾ ಕೊಡುಗೆಗಳನ್ನು ನೀಡಲು ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನಿನ್ನೆ ಬುಧವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ತಿಳಿಸಿದ್ದಾರೆ.
ಪ್ರಧಾನಿ ಮೋದಿಯವರ 75ನೇ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕರೆ ಮಾಡಿದ್ದ ಸಂದರ್ಭದಲ್ಲಿ ಮೋದಿ ಈ ಮಾತುಗಳನ್ನು ಹೇಳಿದ್ದಾರೆ.
ಮೊನ್ನೆ ಮಂಗಳವಾರ ರಾತ್ರಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ದೂರವಾಣಿ ಸಂಭಾಷಣೆಯಲ್ಲಿ ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಪ್ರಯತ್ನಗಳು ಸಹ ಪ್ರಸ್ತಾಪವಾದವು. ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ತಮ್ಮ ಉಪಕ್ರಮಗಳನ್ನು ಭಾರತ ಬೆಂಬಲಿಸುತ್ತದೆ ಎಂದು ಪ್ರಧಾನಿ ಮೋದಿ ಟ್ರಂಪ್‌ಗೆ ತಿಳಿಸಿದ್ದರು.
ಆಗಸ್ಟ್ ಆರಂಭದ ನಂತರ ತಮ್ಮ ಮೂರನೇ ಫೋನ್ ಸಂಭಾಷಣೆಯಲ್ಲಿ, ಮೋದಿ ಮತ್ತು ಪುಟಿನ್ ಭಾರತ-ರಷ್ಯಾ ಸಂಬಂಧಗಳ ಒಟ್ಟಾರೆ ಪಥವನ್ನು ಪರಿಶೀಲಿಸಿದರು.
ಈ ಬಗ್ಗೆ ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, ನನ್ನ ಸ್ನೇಹಿತ, ರಷ್ಯಾ ಅಧ್ಯಕ್ಷ ಪುಟಿನ್, ನನ್ನ 75 ನೇ ಹುಟ್ಟುಹಬ್ಬದಂದು ಫೋನ್ ಕರೆ ಮಾಡಿ ಆತ್ಮೀಯ ಶುಭಾಶಯಗಳನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಮೋದಿ ಬರೆದುಕೊಂಡಿದ್ದಾರೆ.
"ನಮ್ಮ ವಿಶೇಷ ಮತ್ತು ಸವಲತ್ತು ಪಡೆದ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ. ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ಭಾರತವು ಸಾಧ್ಯವಿರುವ ಎಲ್ಲಾ ಕೊಡುಗೆಗಳನ್ನು ನೀಡಲು ಸಿದ್ಧವಾಗಿದೆ" ಎಂದು ಹೇಳಿದ್ದಾರೆ.
ಮೋದಿ ಅವರ ನಾಯಕತ್ವದಲ್ಲಿ ಸಾಮಾಜಿಕ, ಆರ್ಥಿಕ, ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಭಾರತವು "ಪ್ರಭಾವಶಾಲಿ ಫಲಿತಾಂಶಗಳನ್ನು" ಸಾಧಿಸಿದೆ ಎಂದು ಪುಟಿನ್ ಶ್ಲಾಘಿಸಿದ್ದಾರೆ. ಭಾರತ ಸರ್ಕಾರದ ಮುಖ್ಯಸ್ಥರಾಗಿ ನಿಮ್ಮ ಕೆಲಸವು ನಿಮ್ಮ ದೇಶವಾಸಿಗಳಿಂದ ನಿಮಗೆ ಹೆಚ್ಚಿನ ಗೌರವವನ್ನು ಗಳಿಸಿದೆ ಎಂದು ಪುಟಿನ್ ಫೋನ್ ಕರೆಯ ಸಮಯದಲ್ಲಿ ಹೇಳಿದ್ದಾಗಿ ರಷ್ಯಾ ಮಾಧ್ಯಮಗಳಲ್ಲಿ ಉಲ್ಲೇಖವಾಗಿದೆ.
ನಿಮ್ಮ ಮಾರ್ಗದರ್ಶನದಲ್ಲಿ, ಭಾರತವು ಸಾಮಾಜಿಕ, ಆರ್ಥಿಕ, ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಪ್ರಭಾವಶಾಲಿ ಫಲಿತಾಂಶಗಳನ್ನು ಸಾಧಿಸಿದೆ, ನಮ್ಮ ದೇಶಗಳ ನಡುವಿನ ಸವಲತ್ತು ಪಡೆದ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು ಮತ್ತು ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಪ್ರಯೋಜನಕಾರಿ ರಷ್ಯಾ-ಭಾರತೀಯ ಸಹಕಾರವನ್ನು ಉತ್ತೇಜಿಸಲು ನೀವು ವೈಯಕ್ತಿಕವಾಗಿ ಉತ್ತಮ ಕೊಡುಗೆ ನೀಡುತ್ತಿದ್ದೀರಿ ಎಂದು ರಷ್ಯಾದ ಅಧ್ಯಕ್ಷರು ಹೇಳಿದ್ದಾರೆ.
ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಕಾರ್ಯಸೂಚಿಯಲ್ಲಿ ಪ್ರಸ್ತುತ ವಿಷಯಗಳ ಕುರಿತು ರಷ್ಯಾ ಮತ್ತು ಭಾರತ ಖಂಡಿತವಾಗಿಯೂ ರಚನಾತ್ಮಕ ಸಂವಾದ ಮತ್ತು ಜಂಟಿಯಾಗಿ ಕೆಲಸವನ್ನು ಮುಂದುವರಿಸುತ್ತವೆ ಎಂದು ಪುಟಿನ್ ಹೇಳಿದ್ದಾರೆ.
ಈ ವರ್ಷದ ಕೊನೆಯಲ್ಲಿ ಅಧ್ಯಕ್ಷ ಪುಟಿನ್ ಅವರನ್ನು ಭಾರತಕ್ಕೆ ಸ್ವಾಗತಿಸಲು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಪುಟಿನ್ ವಾರ್ಷಿಕ ಭಾರತ-ರಷ್ಯಾ ಶೃಂಗಸಭೆಗಾಗಿ ಭಾರತಕ್ಕೆ ಆಗಮಿಸಲಿದ್ದಾರೆ.
Advertisement