
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಶುಕ್ರವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಅವರು "ನಗರ ನಕ್ಸಲ"ರಂತೆ ಮಾತನಾಡುತ್ತಿದ್ದಾರೆ ಮತ್ತು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರದ ವಿರುದ್ಧ ಯುವಕರನ್ನು ಪ್ರಚೋದಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿ ಅವರು ದೇಶದ ಯುವಕರು ಮತ್ತು ವಿದ್ಯಾರ್ಥಿಗಳಿಗೆ "ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಿ, ಮತ ಕಳ್ಳತನವನ್ನು ನಿಲ್ಲಿಸಬೇಕು" ಎಂದು ಒತ್ತಾಯಿಸಿ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದು, ಇದಕ್ಕೆ ಫಡ್ನವೀಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಪೋಸ್ಟ್ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ಮಹಾ ಸಿಎಂ, "ರಾಹುಲ್ ಗಾಂಧಿಯವರು ಜನ್ - ಝಡ್(ಯುವಕರನ್ನು) ಅನ್ನು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರವನ್ನು ಉರುಳಿಸಲು ಪರಿಣಾಮಕಾರಿಯಾಗಿ ಕೇಳಿಕೊಂಡಿದ್ದಾರೆ. ಅದು 'ಮತ ಚೋರಿ' ಅಲ್ಲ, ಮೆದುಳು ಚೋರಿ ಎಂದು ಟೀಕಿಸಿದರು.
ರಾಹುಲ್ ಗಾಂಧಿ, ಸಂವಿಧಾನ ಅಥವಾ ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ನಂಬಿಕೆಯಿಲ್ಲದ ನಗರ ನಕ್ಸಲ್ ಗಳ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿಯವರ ಸಲಹೆಗಾರರು ಇದೇ ರೀತಿಯ "ನಗರ ನಕ್ಸಲ್ ಮನಸ್ಥಿತಿಯನ್ನು" ಹಂಚಿಕೊಳ್ಳುತ್ತಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಆರೋಪಿಸಿದರು.
Advertisement