
ಪ್ರಯಾಗ್‌ರಾಜ್‌ನ ಮೇಜಾ ನಿವಾಸಿ ಅಂಜನಿ ಮಿಶ್ರಾ ಅವರಿಗೆ ನಿನ್ನೆ ಸಂಜೆಯಿಂದ ನೂರಾರು ಫೋನ್ ಕರೆಗಳು ಬಿಡುವಿಲ್ಲದೆ ಬರುತ್ತಿದೆಯಂತೆ. ಅದಕ್ಕೆ ಕಾರಣ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಿನ್ನೆ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮತ ಕಳ್ಳತನ ಆರೋಪಗಳಿಗೆ ಸಂಬಂಧಿಸಿದಂತೆ ಅಂಜನಿ ಮಿಶ್ರಾ ಅವರ ಫೋನ್ ನಂಬರ್ ಹಂಚಿಕೊಂಡಿದ್ದು.
ಮೇಜಾ ತಹಸಿಲ್‌ನ ಮೇಜಾ ರಸ್ತೆಯಲ್ಲಿ ಸಾಮಾನ್ಯ ಸೇವಾ ಕೇಂದ್ರವನ್ನು ನಡೆಸುತ್ತಿರುವ ಮಿಶ್ರಾ , ನಿನ್ನೆ ಸಂಜೆಯಿಂದ, ಮತ ಕಳ್ಳತನದ ಬಗ್ಗೆ ಕೇಳಿಕೊಂಡು 300 ಕ್ಕೂ ಹೆಚ್ಚು ಕರೆಗಳು ನನಗೆ ಬಂದಿವೆ. ನನಗಂತೂ ಬೇಜಾರಾಗಿಹೋಗಿದೆ. ನಾನು ಹೋಗಿ ರಾಹುಲ್ ಗಾಂಧಿ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ ಎಂದರು.
ನಾನು ಕಳೆದ 15 ವರ್ಷಗಳಿಂದ ಈ ಮೊಬೈಲ್ ಸಂಖ್ಯೆಯನ್ನು ಬಳಸುತ್ತಿದ್ದೇನೆ. ರಾಹುಲ್ ಗಾಂಧಿ ತಮ್ಮ ಪತ್ರಿಕಾಗೋಷ್ಠಿಯಲ್ಲಿ ನನ್ನ ಸಂಖ್ಯೆಯನ್ನು ಹೇಗೆ ಹಂಚಿಕೊಂಡಿದ್ದಾರೆಂದು ನನಗೆ ಗೊತ್ತಿಲ್ಲ, ಈಗ ಕೆಲಸದ ಮಧ್ಯೆ ಫೋನ್ ಕರೆಗಳು ಬರುತ್ತಿರುವುದರಿಂದ ನನಗೆ ಕಿರಿಕಿರಿಯಾಗುತ್ತಿದೆ, ಸಮಸ್ಯೆಯಾಗುತ್ತಿದೆ ಎಂದು ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡುತ್ತಾ ಹೇಳಿದರು.
ಚುನಾವಣಾ ಆಯೋಗದಿಂದ ಮತ ಕಳ್ಳತನ ಬಗ್ಗೆ ತಮ್ಮ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ "ಪ್ರಜಾಪ್ರಭುತ್ವವನ್ನು ನಾಶಪಡಿಸಿದ"ವರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಕರ್ನಾಟಕ ವಿಧಾನಸಭಾ ಆಳಂದ ಕ್ಷೇತ್ರದ ಡೇಟಾವನ್ನು ಉಲ್ಲೇಖಿಸಿ ಕಾಂಗ್ರೆಸ್ ಬೆಂಬಲಿಗರ ಮತಗಳನ್ನು ವ್ಯವಸ್ಥಿತವಾಗಿ ಅಳಿಸಲಾಗುತ್ತಿದೆ ಎಂದು ಹೇಳಿದ್ದರು.
ಚುನಾವಣಾ ಆಯೋಗವು ಈ ಆರೋಪಗಳನ್ನು ಆಧಾರರಹಿತ ಎಂದಿದೆ. ಸಾರ್ವಜನಿಕರಲ್ಲಿ ಯಾರೊಬ್ಬರೂ ಆನ್‌ಲೈನ್‌ನಲ್ಲಿ ಯಾವುದೇ ಮತವನ್ನು ಅಳಿಸಲು ಸಾಧ್ಯವಿಲ್ಲ, ಇದನ್ನು ರಾಹುಲ್ ಗಾಂಧಿಯವರು ತಪ್ಪಾಗಿ ಭಾವಿಸಿದ್ದಾರೆ ಎಂದು ಹೇಳಿತ್ತು.
Advertisement