
ತನ್ನ ರೂಮಿನ ಸಹಪಾಠಿಗಳ ಜೊತೆ ವಾಗ್ವಾದ ನಡೆದು ಪೊಲೀಸರಿಂದ ಗುಂಡಿಕ್ಕಿ ಹತ್ಯೆಯಾದ ತೆಲಂಗಾಣ ಮೂಲದ 30 ವರ್ಷದ ಯುವಕ ಮೊಹಮ್ಮದ್ ನಿಜಾಮುದ್ದೀನ್ ಬಗ್ಗೆ ಆತನ ಕುಟುಂಬಸ್ಥರು ಮಾತನಾಡಿದ್ದಾರೆ.
ತೆಲಂಗಾಣದ ಮೆಹಬೂಬ್‌ನಗರದಲ್ಲಿ ನೆಲೆಸಿರುವ ಆತನ ಕುಟುಂಬಸ್ಥರು ನಿಜಾಮುದ್ದೀನ್ ಈ ಹಿಂದೆ ಅಮೆರಿಕದಲ್ಲಿ ತನ್ನ ಮೇಲೆ ಜನಾಂಗೀಯ ತಾರತಮ್ಯ ಮತ್ತು ಕೆಲಸದ ಸ್ಥಳದಲ್ಲಿ ಕಿರುಕುಳವಾಗುತ್ತಿದೆ ಎಂದು ನೋವು ತೋಡಿಕೊಂಡಿದ್ದ ಎಂದಿದ್ದಾರೆ.
ಅಮೆರಿಕಾದ ಕ್ಯಾಲಿಫೋರ್ನಿಯಾದ ಸಾಂತಾ ಕ್ಲಾರಾ ಪೊಲೀಸರ ಪ್ರಕಾರ, ಮೊನ್ನೆ ಸೆಪ್ಟೆಂಬರ್ 3 ರಂದು ಇಬ್ಬರು ರೂಮ್‌ಮೇಟ್‌ಗಳ ಮಧ್ಯೆ ಗಲಾಟೆಯಾಗಿ 911 ಕರೆ ಬಂದಾಗ ತಕ್ಷಣವೇ ಪೊಲೀಸರು ಹೋಗಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಪರಿಸ್ಥಿತಿ ಉಲ್ಬಣಗೊಂಡಿದೆ ಎಂದು ಗೊತ್ತಾಯಿತು, ಶಂಕಿತ ಆರೋಪಿ ನಿಜಾಮುದ್ದೀನ್ ನನ್ನು ಹೊಡೆದು ನೆಲಕ್ಕುರುಳಿಸಿದ್ದನು ಎಂದು ಹೇಳಲಾಗಿದೆ.
ಪೊಲೀಸ್ ಮುಖ್ಯಸ್ಥ ಪ್ಯಾಟ್ ನಿಕೊಲಾಯ್ ನೀಡಿದ ವಿಡಿಯೊ ಹೇಳಿಕೆಯಲ್ಲಿ, ಅಧಿಕಾರಿಗಳು ಅನೇಕ ಮೌಖಿಕ ಆಜ್ಞೆಗಳನ್ನು ನೀಡಿದ್ದರೂ ಅವುಗಳನ್ನು ನಿರ್ಲಕ್ಷಿಸಲಾಗಿತ್ತು. ನಿಜಾಮುದ್ದೀನ್ ಕಡೆಗೆ ಒಬ್ಬ ಚಾಕುವನ್ನು ತರುತ್ತಿರುವ ಶಂಕಿತನನ್ನು ಒಬ್ಬ ಅಧಿಕಾರಿ ನೋಡಿದಾಗ, ಆತ ನಾಲ್ಕು ಬಾರಿ ಗುಂಡುಗಳನ್ನು ಹಾರಿಸಿದ್ದನು. ನಿಜಾಮುದ್ದೀನ್ ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿ ಮೃತ ಎಂದು ಘೋಷಿಸಲಾಯಿತು.
ಘಟನೆಗೆ ಮೊದಲು, ನಿಜಾಮುದ್ದೀನ್ ಜನಾಂಗೀಯ ದ್ವೇಷ, ವೇತನ ವಂಚನೆ, ತಪ್ಪಾಗಿ ಸಂಸ್ಥೆಯಿಂದ ವಜಾ ಮತ್ತು ಉದ್ಯೋಗದಾತರು ಮತ್ತು ಇತರರಿಂದ ಕಿರುಕುಳವಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.
ನಾನು ಜನಾಂಗೀಯ ದ್ವೇಷ, ಜನಾಂಗೀಯ ತಾರತಮ್ಯ, ಜನಾಂಗೀಯ ಕಿರುಕುಳ, ಚಿತ್ರಹಿಂಸೆ, ವೇತನ ವಂಚನೆ, ಕೆಲಸದಿಂದ ವಜಾ ಮತ್ತು ನ್ಯಾಯಕ್ಕೆ ಅಡ್ಡಿಪಡಿಸುವಿಕೆಗೆ ಬಲಿಯಾಗಿದ್ದೇನೆ" ಎಂದು ಬರೆದುಕೊಂಡಿದ್ದರು.
ನಿಜಾಮುದ್ದೀನ್ ಸ್ನೇಹಿತನ ಮೂಲಕ ಘಟನೆಯ ಬಗ್ಗೆ ಕುಟುಂಬಕ್ಕೆ ತಿಳಿಸಿದ್ದು, ತಂದೆ ಮೊಹಮ್ಮದ್ ಹಸ್ನುದ್ದೀನ್ ಮಗನ ಮೃತದೇಹವನ್ನು ಮನೆಗೆ ತರಲು ಸಹಾಯ ಮಾಡುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ನಿಜಾಮುದ್ದೀನ್ ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಅಮೆರಿಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
Advertisement