
Apple iphone 17 : ಭಾರತದಲ್ಲಿ ಆಪಲ್ ಐಫೋನ್ ಹೊಸ ಸಿರೀಸ್ ಬಿಡುಗಡೆಯಾಗಿ ಇಂದು ಮಾರಾಟ ಆರಂಭವಾಗಿದೆ. ಅದರ ಖರೀದಿಗೆ ಜನರು ಮುಂಬೈಯಲ್ಲಿ ಮುಗಿಬಿದ್ದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ರಾತ್ರಿಯಿಂದಲೇ ಸ್ಟೋರ್ ಮುಂದೆ ಕ್ಯೂ ನಿಂತಿದ್ದ ಜನರು ಗಲಾಟೆ ಮಾಡಿಕೊಂಡಿದ್ದಾರೆ.
ಇಂದು ಬೆಳಗ್ಗೆಯಿಂದ ಐಫೋನ್ 17 ಸಿರೀಸ್ ಫೋನ್ ಮಾರಾಟ ಆರಂಭವಾಗಿದೆ. ಐಫೋನ್ 17 ಖರೀದಿಗೆ ಭಾರತೀಯರು ಆಸಕ್ತಿ ತೋರಿದ್ದಾರೆ. ನಿನ್ನೆ ಮಧ್ಯರಾತ್ರಿಯಿಂದಲೇ ಕೆಲ ಮಳಿಗೆ ಮುಂದೆ ಜನರ ಕ್ಯೂ ನಿಂತಿದ್ದರೆ ವಾಣಿಜ್ಯ ನಗರಿ ಮುಂಬೈಯಲ್ಲಿ ಪರಿಸ್ಥಿತಿ ಕೈಮೀರಿ ಹೋಗಿ ಜನರು ಕಿತ್ತಾಡಿಕೊಂಡಿದ್ದು, ಕೈ ಕೈ ಮಿಲಾಯಿಸಿದ್ದಾರೆ.
ಐಫೋನ್ 17 ಗಾಗಿ ಕಪಾಳ ಮೋಕ್ಷ : ದೆಹಲಿ ಹಾಗೂ ಮುಂಬೈನ ಆಪಲ್ ಸ್ಟೋರ್ (Apple Store) ಗಳಲ್ಲಿ ಗ್ರಾಹಕರ ದೊಡ್ಡ ಸಾಲೇ ಇದೆ. ನಿರೀಕ್ಷೆಗೂ ಮೀರಿ ಜನರು ಆಪಲ್ ಐಫೋನ್ 17 ಖರೀದಿಗೆ ಮುಂದಾಗಿದ್ದಾರೆ. ಮುಂಬೈನ ಬಿಕೆಸಿ ಜಿಯೋ ಸೆಂಟರ್ನಲ್ಲಿ ಪರಿಸ್ಥಿತಿ ಎಲ್ಲೆ ಮೀರಿತ್ತು. ಆಪಲ್ ಸ್ಟೋರ್ ಹೊರಗೆ ಜನರ ದಂಡೇ ನೆರೆದಿತ್ತು. ಈ ಮಧ್ಯೆ ನೂಕುನುಗ್ಗಲು ಉಂಟಾಗಿ ಗಲಾಟೆ ನಡೆದಿದೆ. ಪರಸ್ಪರ ಹೊಡೆದಾಡಿಕೊಂಡು, ಗುದ್ದಾಡಿಕೊಂಡು ಕಪಾಳಮೋಕ್ಷ ಮಾಡಿಕೊಂಡಿದ್ದಾರೆ.
ಸ್ಥಳದಲ್ಲಿದ್ದ ಸೆಕ್ಯೂರಿಟಿ ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸ್ಟೋರ್ ಮುಂದೆ ಕೆಲ ಗ್ರಾಹಕರು ರಾತ್ರಿಯಿಂದಲೇ ಕಾಯುತ್ತಿದ್ದರು. ಸಾಲಿನಲ್ಲಿ ವ್ಯತ್ಯಾಸವಾಗಿ ಸಣ್ಣ ಗಲಾಟೆ ನಡೆದಿತ್ತು ಎನ್ನುತ್ತಾರೆ ಸಿಬ್ಬಂದಿ.
ಮೊದಲು ಐಫೋನ್ 17 ಖರೀದಿಸುವ ಆತುರ : ಐಫೋನ್ 17 ಆನ್ಲೈನ್ ನಲ್ಲೂ ಲಭ್ಯವಿದೆ. ಅಲ್ಲದೆ ಐಫೋನ್ ಸ್ಟೋರ್ ಗಳಲ್ಲಿಯೂ ಸಿಗುತ್ತಿದೆ. ಎಲ್ಲರಿಗಿಂತ ಮೊದಲು ನಾವೇ ಖರೀದಿಸಬೇಕೆಂಬ ಧಾವಂತ ಇಂತಹ ಘಟನೆಗೆ ಕಾರಣವಾಗುತ್ತದೆ.
Advertisement