
ನವದೆಹಲಿ: ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ (ಇಎಸಿ) ಸದಸ್ಯ ಸಂಜೀವ್ ಸನ್ಯಾಲ್ (Sanjeev Sanyal) ಪ್ರಸ್ತುತ ಭಾರತದ ನ್ಯಾಯಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯ ರೀತಿ ವಿಕಸಿತ ಭಾರತದ ಗುರಿಗೆ ದೊಡ್ಡ ಅಡಚಣೆಯಾಗಿದೆ ಎಂದು ಹೇಳಿದ್ದಾರೆ.
ನ್ಯಾಯಾಂಗ ವ್ಯವಸ್ಥೆ ಕಾರ್ಯನಿರ್ವಯಣೆ ಕೂಲಂಕುಷ ಪರೀಕ್ಷೆಗೆ ಒಳಗಾಗದ ಹೊರತು, ಅಭಿವೃದ್ಧಿ ಹೊಂದಿದ ಆರ್ಥಿಕತೆಯಾಗುವ 'ವಿಕಸಿತ ಭಾರತ' ದೃಷ್ಟಿಕೋನವನ್ನು ಸಾಧಿಸಲು ಇತರ ಸುಧಾರಣೆಗಳು ಸಾಕಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.
"ವಿಕಸಿತ ಭಾರತ" ಗುರಿ ತಲುಪಲು ನಮಗೆ 20-25 ವರ್ಷಗಳ ನಡುವೆ ಪರಿಣಾಮಕಾರಿ ಸಮಯವಿದೆ" ಎಂದು ಸನ್ಯಾಲ್ ಸಭೆಯೊಂದನ್ನುದ್ದೇಶಿಸಿ ಮಾತನಾಡುತ್ತಾ ತುರ್ತು ಸುಧಾರಣೆಗಳಿಗೆ ಒತ್ತಾಯಿಸಿದ್ದಾರೆ.
"ನ್ಯಾಯಾಂಗ ವ್ಯವಸ್ಥೆ ಮತ್ತು ಕಾನೂನು ಪರಿಸರ ವ್ಯವಸ್ಥೆ, ನನ್ನ ಅಭಿಪ್ರಾಯದಲ್ಲಿ, ವಿಕಸಿತ ಭಾರತ ಗುರಿಗೆ ಮತ್ತು ವೇಗವಾಗಿ ಬೆಳೆಯುವ ಉದ್ದೇಶಕ್ಕೆ ಏಕೈಕ ದೊಡ್ಡ ಅಡಚಣೆಯಾಗಿದೆ." ಎಂದು ಸಂಜೀವ್ ಸನ್ಯಾಲ್ ಹೇಳಿದ್ದಾರೆ.
ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಉಳಿದಿದೆ ಎಂದು ಗಮನಿಸಿದ ಅವರು, ಆ ಬೆಳವಣಿಗೆಯನ್ನು ವಿಶಾಲ ಆಧಾರಿತ ಸಮೃದ್ಧಿಯಾಗಿ ಪರಿವರ್ತಿಸಲು ದೇಶಕ್ಕೆ ಸೀಮಿತ ಅವಧಿ ಇದೆ ಎಂದು ಹೇಳಿದರು. ಈ ಸೀಮಿತ ಅವಧಿಯ ಅದರ ನಂತರ ನಾವು ಇಂದು ಜಪಾನ್ ಮತ್ತು ಯುರೋಪಿನಂತೆ ವಯಸ್ಸಾದವರನ್ನು ಹೆಚ್ಚು ಹೊಂದಿರುವ ದೇಶವಾಗಲಿದ್ದೇವೆ. ಆದ್ದರಿಂದ ನಾವು ಸಾಧ್ಯವಾದಷ್ಟು ವೇಗವಾಗಿ ಬೆಳೆಯಬೇಕಾದ ಎರಡು ದಶಕಗಳು ಇವು" ಎಂದು ಅವರು ಹೇಳಿದ್ದಾರೆ.
ನಿಯಮಗಳನ್ನು ಅತಿಯಾಗಿ ರೂಪಿಸಲು ನೀತಿ ನಿರೂಪಕರನ್ನು ಒತ್ತಾಯಿಸುವ ಪ್ರಮುಖ ಸಮಸ್ಯೆಗಳೆಂದರೆ ನಿಧಾನಗತಿಯ ವಿವಾದ ಪರಿಹಾರ ಮತ್ತು ಒಪ್ಪಂದಗಳ ದುರ್ಬಲ ಜಾರಿ ಎಂದು EAC ಸದಸ್ಯ ಸನ್ಯಾಲ್ ಹೇಳಿದ್ದಾರೆ.
"ಒಬ್ಬ ನಾಗರಿಕನಾಗಿ, ನನ್ನ ಪ್ರಕರಣವನ್ನು ಹೇಗೆ ವಾದಿಸಬೇಕೆಂದು ನಾನು ಯೋಚಿಸಬಹುದಾದರೆ, ಎಐ ಯುಗದಲ್ಲಿ ಸ್ಪಷ್ಟವಾದ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳೊಂದಿಗೆ ನನ್ನ ಪ್ರಕರಣವನ್ನು ವಾದ ಮಾಡಲು ಮಾಡಲು ನನಗೆ ಅವಕಾಶ ನೀಡಬೇಕು ಎಂದು ಸನ್ಯಾಲ್ ಹೇಳಿದ್ದಾರೆ.
ನ್ಯಾಯಾಲಯದ ಪದ್ಧತಿಗಳು ಮತ್ತು ವೇಳಾಪಟ್ಟಿಗಳ ಆಧುನೀಕರಣಕ್ಕೂ ಅವರು ಕರೆ ನೀಡಿದ ಅವರು, "ನೀವು 'ಮೈ ಲಾರ್ಡ್' ನಂತಹ ಪದಗಳನ್ನು ಬಳಸುವ ವೃತ್ತಿಯನ್ನು ಹೊಂದಲು ಸಾಧ್ಯವಿಲ್ಲ... ಒಬ್ಬ ನಾಗರಿಕನು ಇನ್ನೊಬ್ಬ ನಾಗರಿಕನನ್ನು 'ಮೈ ಲಾರ್ಡ್' ಎಂದು ಕರೆಯುವುದು ಸೂಕ್ತವಲ್ಲ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ದೀರ್ಘ ನ್ಯಾಯಾಂಗ ರಜೆಗಳನ್ನು ಪ್ರಶ್ನಿಸಿರುವ ಸನ್ಯಾಲ್, ನ್ಯಾಯಾಂಗವೂ ಇತರ ಸೇವೆಗಳಂತೆಯೇ ಅತಿ ಮುಖ್ಯವಾದ ಸೇವೆಯಾಗಿದೆ. ವೈದ್ಯರು ದೀರ್ಘಾವಧಿ ರಜೆ ತೆಗೆದುಕೊಂಡರೆ ಅದು ಸೂಕ್ತವಾಗಿರುತ್ತದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
Advertisement