
ನವದೆಹಲಿ: ಈ ಬಾರಿ ರಾಮಲೀಲಾದಲ್ಲಿ ರಾವಣನ ಪತ್ನಿ ಮಂಡೋದರಿ ಪಾತ್ರ ನಿರ್ವಹಿಸಬೇಕಾಗಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ ಗೆ ದೆಹಲಿಯ ಲವ್ ಕುಶ್ ರಾಮಲೀಲಾ ಸಮಿತಿ ಶಾಕ್ ನೀಡಿದೆ. ಕೆಲವು ಗುಂಪುಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪೂನಂ ಪಾಂಡೆ ಕೈಬಿಡಲು ನಿರ್ಧರಿಸಿದೆ.
ರಾಷ್ಟ್ರ ರಾಜಧಾನಿಯ ಕಾನ್‌ಸ್ಟಿಟ್ಯೂಷನಲ್ ಕ್ಲಬ್ ಆಫ್ ಇಂಡಿಯಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಅರ್ಜುನ್ ಕುಮಾರ್, ಒಬ್ಬ ಕಲಾವಿದನನ್ನು ಅವರ ಕೆಲಸದಿಂದ ನಿರ್ಧರಿಸಬೇಕೆ ಹೊರತು ಅವರ ಹಿಂದಿನ ಕೆಲಸಗಳಿಂದ ಅಲ್ಲ. ಆದಾಗ್ಯೂ, ಸಾರ್ವಜನಿಕ ಭಾವನೆಗಳ ಹಿನ್ನೆಲೆಯಲ್ಲಿ ನಿರ್ಧಾರವನ್ನು ಪರಿಶೀಲಿಸಬೇಕಾಯಿತು ಎಂದು ತಿಳಿಸಿದರು.
"ಸಮಾಜದಲ್ಲಿ ಪ್ರತಿಯೊಬ್ಬ ಮಹಿಳೆಗೂ ಪಾತ್ರವಿದ್ದು, ಅವರನ್ನು ಅವಮಾನಿಸಬಾರದು. ಆರಂಭದಲ್ಲಿ ಪೂನಂ ಪಾಂಡೆ ಮಂಡೋದರಿ ಪಾತ್ರವನ್ನು ಸಮರ್ಪಕವಾಗಿ ನಿರ್ವಹಿಸಬಹುದು ಎಂದು ನಾವು ನಂಬಿದ್ದೆವು. ಆದರೆ ಕೆಲವು ಗುಂಪಿನ ವಿರೋಧವನ್ನು ಪರಿಗಣಿಸಿ, ನಿರ್ಧಾರವನ್ನು ನಾವು ಮರುಪರಿಶೀಲಿಸಬೇಕಾಗಿದೆ ಎಂದು ಕುಮಾರ್ ಹೇಳಿದರು.
ಓರ್ವ ಕಲಾವಿದೆಯಾಗಿ ಪೂನಂ ಪಾಂಡೆ ಅವರನ್ನು ಸಮಿತಿ ಗೌರವಿಸುತ್ತದೆ. ಆದರೆ ಮಂಡೋದರಿ ಪಾತ್ರವನ್ನು ಬೇರೆ ನಟಿಯಿಂದ ಮಾಡಿಸಲಾಗುವುದು ಎಂದು ಅವರು ತಿಳಿಸಿದರು.
Advertisement