
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಖಾಲಿ ಇರುವ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ(ECI) ಬುಧವಾರ ಪ್ರಕಟಿಸಿದೆ. ಈ ನಾಲ್ಕು ಖಾಲಿ ಸ್ಥಾನಗಳಿಗೆ ಅಕ್ಟೋಬರ್ 24 ರಂದು ಮತದಾನ ನಡೆಯಲಿದೆ.
ನಾಲ್ಕು ಖಾಲಿ ಇರುವ ರಾಜ್ಯಸಭಾ ಸ್ಥಾನಗಳಿಗೆ ಅಕ್ಟೋಬರ್ 6 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.
"ನಾಮ ಪತ್ರಗಳನ್ನು ಸಲ್ಲಿಸಲು ಅಕ್ಟೋಬರ್ 13 ಕೊನೆಯ ದಿನಾಂಕವಾಗಿದ್ದು, ನಾಮಪತ್ರಗಳ ಪರಿಶೀಲನೆ ಅಕ್ಟೋಬರ್ 14 ರಂದು ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಅಕ್ಟೋಬರ್ 16 ಕೊನೆಯ ದಿನವಾಗಿದೆ".
ಖಾಲಿ ಇರುವ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಅಕ್ಟೋಬರ್ 24 ರಂದು ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದೆ ಮತ್ತು ಮತ ಎಣಿಕೆ ಅದೇ ದಿನ ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ.
ಪಿಡಿಪಿ ಸದಸ್ಯರಾದ ಮೀರ್ ಮೊಹಮ್ಮದ್ ಫಯಾಜ್ ಮತ್ತು ನಜೀರ್ ಅಹ್ಮದ್ ಲಾವೆ, ಬಿಜೆಪಿ ಸದಸ್ಯ ಶಂಶೇರ್ ಸಿಂಗ್ ಮತ್ತು ಮಾಜಿ ಕಾಂಗ್ರೆಸ್ ಸಂಸದ ಗುಲಾಮ್ ನಬಿ ಆಜಾದ್ ಅವರ ಅವಧಿ ಮುಗಿದ ನಂತರ ಜಮ್ಮು ಮತ್ತು ಕಾಶ್ಮೀರದ ನಾಲ್ಕು ರಾಜ್ಯಸಭಾ ಸ್ಥಾನಗಳು ಫೆಬ್ರವರಿ 2021ರಿಂದ ಖಾಲಿ ಇದ್ದವು.
ಫೆಬ್ರವರಿ 2021 ರಿಂದ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯದ ಕಾರಣ ಜಮ್ಮು ಮತ್ತು ಕಾಶ್ಮೀರದ ನಾಲ್ಕು ರಾಜ್ಯಸಭಾ ಸ್ಥಾನಗಳು ಖಾಲಿ ಉಳಿದಿದ್ದವು.
370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಮತ್ತು ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ, 90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಕಳೆದ ವರ್ಷ ಚುನಾವಣೆ ನಡೆದಿತ್ತು.
Advertisement