
ಇಂದೋರ್: ಇಂದೋರ್ ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಪ್ಯಾಂಟ್ ಒಳಗೆ ಇಲಿ ನುಗ್ಗಿದ ವಿಚಿತ್ರ ಘಟನೆ ಮಧ್ಯ ಪ್ರದೇಶದ ಇಂದೋರ್ ವಿಮಾನ ನಿಲ್ದಾಣದಲ್ಲಿ ಮಂಗಳವಾರ ನಡೆದಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು. ಇಲಿ ಕಚ್ಚಿಸಿಕೊಂಡ ಪ್ರಯಾಣಿಕನೊಂದಿಗೆ ಅಸೂಕ್ಷ್ಮವಾಗಿ ವರ್ತಿಸಿದ ವೈದ್ಯರೊಬ್ಬರನ್ನು ನಿಲ್ದಾಣದಿಂದ ಹೊರಹಾಕಲು ನಿರ್ಧರಿಸಿದ್ದಾರೆ ಮತ್ತು ಕೀಟ ನಿಯಂತ್ರಣ ಸಂಸ್ಥೆಗೆ ದಂಡ ವಿಧಿಸಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಮಂಗಳವಾರ ವಿಮಾನ ನಿಲ್ದಾಣದ ನಿರ್ಗಮನ ಪ್ರದೇಶದಲ್ಲಿ ಇಂದೋರ್‌ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಪ್ಯಾಂಟ್ ಒಳಗೆ ನುಗ್ಗಿದ ಇಲಿ, ಅವರಿಗೆ ಕಚ್ಚಿದೆ. ಇಲಿ ಇದ್ದಕ್ಕಿದ್ದಂತೆ ತನ್ನ ಪ್ಯಾಂಟ್ ಒಳಗೆ ನುಗ್ಗಿ, ತನ್ನ ಕಾಲನ್ನು ಕಚ್ಚಿದೆ ಎಂದು ಪ್ರಯಾಣಿಕ ಆರೋಪಿಸಿದ್ದಾರೆ.
ಘಟನೆಯ ನಂತರ ಪ್ರಯಾಣಿಕನು ಜೋರಾಗಿ ಪ್ರತಿಭಟಿಸಿ ತನ್ನ ವೈಯಕ್ತಿಕ ವೈದ್ಯರ ಸಲಹೆಯ ಮೇರೆಗೆ ರೇಬೀಸ್ ಇಂಜೆಕ್ಷನ್ ನೀಡಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಲಸಿಕೆ ವಿಮಾನ ನಿಲ್ದಾಣದ ಆರೋಗ್ಯ ಸೌಲಭ್ಯದಲ್ಲಿ ಲಭ್ಯವಿರಲಿಲ್ಲ. ಹೀಗಾಗಿ ವಿಮಾನ ನಿಲ್ದಾಣದ ವೈದ್ಯರು ಅವರಿಗೆ ಟೆಟನಸ್ ಇಂಜೆಕ್ಷನ್ ನೀಡಿ, ಗಾಯಕ್ಕೆ ಬಟ್ಟೆ ಕಟ್ಟಿದರು ಮತ್ತು ಮಾತ್ರೆಗಳನ್ನು ನೀಡಿದರು.
ವೈದ್ಯರು ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಖಾಸಗಿ ಆಸ್ಪತ್ರೆಗೆ ಸೇರಿದ್ದಾರೆ. "ಗಾಯಗೊಂಡ ಪ್ರಯಾಣಿಕನೊಂದಿಗೆ ವೈದ್ಯರು ಅಸೂಕ್ಷ್ಮವಾಗಿ ವರ್ತಿಸಿದ್ದಾರೆ ಎಂದು ನಮಗೆ ತಿಳಿದುಬಂದಿದೆ. ಆದರೂ ಅವರ ವರ್ತನೆ ಅಸಭ್ಯವಾಗಿಲ್ಲ. ವಿಮಾನ ನಿಲ್ದಾಣದಲ್ಲಿ ಬೇರೆ ವೈದ್ಯರನ್ನು ನೇಮಿಸುವಂತೆ ನಾವು ಆಸ್ಪತ್ರೆಗೆ ಸೂಚಿಸಿದ್ದೇವೆ" ಎಂದು ವಿಮಾನ ನಿಲ್ದಾಣದ ನಿರ್ದೇಶಕ ವಿಪಿನ್ ಕಾಂತ್ ಸೇಠ್ ಪಿಟಿಐಗೆ ತಿಳಿಸಿದ್ದಾರೆ.
ಟೆಂಡರ್ ಷರತ್ತುಗಳ ಅಡಿಯಲ್ಲಿ ಕೀಟ ನಿಯಂತ್ರಣ ಸಂಸ್ಥೆಗೆ 500 ರೂ.ಗಳ ಆರಂಭಿಕ ದಂಡವನ್ನು ವಿಧಿಸಲಾಗಿದೆ ಮತ್ತು ಹೌಸ್ ಕೀಪಿಂಗ್ ಗುತ್ತಿಗೆದಾರರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದರು.
Advertisement