
ಚೆನ್ನೈ: ಯಾವುದೇ ರಾಜಕೀಯ ನಾಯಕರು ತಮ್ಮ ಅಭಿಮಾನಿಗಳು ಅಥವಾ ಅಮಾಯಕ ನಾಗರಿಕರು ಸಾಯಬೇಕೆಂದು ಯಾವತ್ತೂ ಬಯಸುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೋಮವಾರ ವಿಡಿಯೋ ಸಂದೇಶವೊಂದರಲ್ಲಿ ಹೇಳಿದ್ದಾರೆ
41 ಜೀವಗಳನ್ನು ಬಲಿತೆಗೆದುಕೊಂಡ ಕರೂರ್ ಕಾಲ್ತುಳಿತದ ಬಗ್ಗೆ "ಬೇಜವಾಬ್ದಾರಿ ಮತ್ತು ದುರುದ್ದೇಶಪೂರಿತ ಸುದ್ದಿ" ಹರಡುವುದನ್ನು ನಿಲ್ಲಿಸಬೇಕೆಂದು ಸಿಎಂ ಸ್ಟಾಲಿನ್ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ದುರಂತದ ತನಿಖೆಗಾಗಿ ರಚಿಸಲಾದ ನ್ಯಾಯಮೂರ್ತಿ ಅರುಣಾ ಜಗದೀಶನ್ ಅವರ ವಿಚಾರಣಾ ಆಯೋಗದ ವರದಿ ಬಂದ ನಂತರ, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಮಾರ್ಗಸೂಚಿ ಮತ್ತು ನಿಯಮಗಳನ್ನು ರೂಪಿಸಲಾಗುವುದು. ಎಲ್ಲರೂ ಈ ನಿಯಮಗಳಿಗೆ ಸಹಕರಿಸುತ್ತಾರೆ ಎಂದು ನಾನು ನಂಬುತ್ತೇನೆ" ಎಂದು ಅವರು ಹೇಳಿದ್ದಾರೆ.
"ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕ ಸಂಸ್ಥೆಗಳು ಅಂತಹ ಕಾರ್ಯಕ್ರಮಗಳನ್ನು ನಡೆಸಿದಾಗ, ಭವಿಷ್ಯದಲ್ಲಿ ಜವಾಬ್ದಾರಿಯುತವಾಗಿ ಹೇಗೆ ವರ್ತಿಸಬೇಕು ಎಂಬುದರ ಕುರಿತು ನಿಯಮಗಳನ್ನು ರೂಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ" ಎಂದು ಶನಿವಾರ ಕರೂರಿನಲ್ಲಿ ನಡೆದ ಘಟನೆಯನ್ನು ನೇರವಾಗಿ ಉಲ್ಲೇಖಿಸದೆ ಅಥವಾ ದೂಷಿಸದೆ ಸ್ಟಾಲಿನ್ ಹೇಳಿದ್ದಾರೆ.
"ರಾಜಕೀಯ ಭಿನ್ನಾಭಿಪ್ರಾಯಗಳು, ವೈಯಕ್ತಿಕ ಸಂಘರ್ಷಗಳು ಮತ್ತು ದ್ವೇಷಗಳನ್ನು ಬದಿಗಿಟ್ಟು, ಜನರ ಕಲ್ಯಾಣದ ಮೇಲೆ ಮಾತ್ರ ಗಮನಹರಿಸುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ" ಎಂದು ಸ್ಟಾಲಿನ್ ವಿಡಿಯೋದಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು ಮತ್ತು ಸುಳ್ಳು ಸುದ್ದಿಗಳು ಹರಡಲಾಗುತ್ತಿದೆ. ಮೃತರ ರಾಜಕೀಯ ಸಂಬಂಧ ಏನೇ ಇರಲಿ, ಅವರೆಲ್ಲರೂ 'ನನ್ನ ತಮಿಳು ಸಹೋದರರು' ಎಂದು ಸಿಎಂ ಒತ್ತಿ ಹೇಳಿದ್ದಾರೆ.
ದುರಂತದ ನಿಜವಾದ ಮತ್ತು ಸಂಪೂರ್ಣ ಕಾರಣವನ್ನು ಬಹಿರಂಗಪಡಿಸುವ ಗುರಿಯನ್ನು ಹೊಂದಿರುವ ತನಿಖಾ ಆಯೋಗದ ವರದಿಯ ಆಧಾರದ ಮೇಲೆ ಸರ್ಕಾರವು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.
ಇಂತಹ ಘಟನೆಗಳು ಎಂದಿಗೂ ಮರುಕಳಿಸದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. "ಕರೂರಿನಲ್ಲಿ ನಡೆದದ್ದು ಒಂದು ದೊಡ್ಡ ಮತ್ತು ಭಯಾನಕ ದುರಂತ! ಹಿಂದೆಂದೂ ಸಂಭವಿಸದ ದುರಂತ ಮತ್ತು ಮತ್ತೆಂದೂ ಇದು ಸಂಭವಿಸಬಾರದು" ಎಂದು ಅವರು ಹೇಳಿದ್ದಾರೆ.
Advertisement