
ನವದೆಹಲಿ: 'ನಕ್ಸಲೀಯರೊಂದಿಗೆ ಕದನ ವಿರಾಮ' ಘೋಷಣೆಯನ್ನು ತಳ್ಳಿಹಾಕಿದ ಕೇಂದ್ರ ಸರ್ಕಾರ ಗೃಹ ಸಚಿವ ಅಮಿತ್ ಶಾ ಅವರ ನಿರ್ಧಾರವನ್ನು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಸೋಮವಾರ ಪ್ರಶ್ನಿಸಿದ್ದಾರೆ.
ಸರ್ಕಾರದೊಂದಿಗೆ ಮಾತುಕತೆ ನಡೆಸಲು ನಕ್ಸಲೀಯರು ಬಯಸಿದ್ದು, ಕದನ ವಿರಾಮವನ್ನು ಪ್ರಸ್ತಾಪಿಸಿದ್ದಾರೆ. ಆದರೆ ಕೇಂದ್ರ ಸರ್ಕಾರವೇಕೆ ಒಪ್ಪಿಕೊಳ್ಳುತ್ತಿಲ್ಲ?ಎಂದರು.
ನಕ್ಸಲೀಯರ ಕದನ ವಿರಾಮ ಪ್ರಸ್ತಾಪವನ್ನು ಭಾನುವಾರ ತಿರಸ್ಕರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಕ್ಸಲೀಯರು ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಲು ಬಯಸಿದರೆ, ಸ್ವಾಗತಾರ್ಹವಾದದ್ದು, ಭದ್ರತಾ ಪಡೆಗಳು ಅವರ ಮೇಲೆ ಒಂದೇ ಒಂದು ಗುಂಡು ಹಾರಿಸುವುದಿಲ್ಲ ಎಂದು ಹೇಳಿದರು.
ಛತ್ತೀಸ್‌ಗಢ-ತೆಲಂಗಾಣ ಗಡಿಯಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಆಪರೇಷನ್ ಕಾಗರ್ (ಆಪರೇಷನ್ ಬ್ಲಾಕ್ ಫಾರೆಸ್ಟ್ ಎಂದೂ ಸಹ ಕರೆಯುತ್ತಾರೆ) ಭಾಗವಾಗಿ ಹಲವಾರು ನಕ್ಸಲ್ ನಾಯಕರನ್ನು ಹತ್ಯೆ ಮಾಡಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ. ರಾಜಾ, ಇದೇನು ಆಪರೇಷನ್ ಕಾಗರ್? ಎಷ್ಟು ನಕ್ಸಲೀಯರು, ಬುಡಕಟ್ಟು ಜನರನ್ನು ಕೊಂದರು ಎಂಬುದನ್ನು ಸರ್ಕಾರ ನಮಗೆ ಹೇಳಬಹುದೇ? ಎಂದು ಕೇಳಿದರು.
ಈ ಸರ್ಕಾರ ಬುಡಕಟ್ಟು ಜನರನ್ನು ಅರಣ್ಯದಿಂದ ಹೊರಹಾಕಲು ಪ್ರಯತ್ನಿಸುತ್ತಿದ್ದು, ಈ ಅರಣ್ಯ ಭೂಮಿಯನ್ನು ಅದಾನಿಗಳಂತಹವರಿಗೆ ಹಸ್ತಾಂತರಿಸಲು ಬಯಸುತ್ತಿದ್ದಾರೆ. ಈಗಾಗಲೇ ಬಂದರುಗಳು, ವಿಮಾನ ನಿಲ್ದಾಣಗಳನ್ನು ಅದಾನಿಗಳಿಗೆ ನೀಡಲಾಗಿದೆ. ಈಗ ಅರಣ್ಯಗಳನ್ನು ಅದಾನಿಗೆ ಹಸ್ತಾಂತರಿಸಲಾಗುವುದು. ಆಗ ಏನು ಉಳಿಯುತ್ತದೆ ಎಂದು ಪ್ರಶ್ನಿಸಿದ ಅವರು, ಇಂದು ನಾವು ಯಾವ ಭಾರತದಲ್ಲಿದ್ದೀವಿ? ಇದು ಪ್ರಜಾಪ್ರಭುತ್ವ ಗಣರಾಜ್ಯನಾ? ಎಂದು ವಾಗ್ದಾಳಿ ನಡೆಸಿದರು.
ಎಡಪಕ್ಷಗಳು ಎಡಪಂಥೀಯ ಉಗ್ರವಾದಕ್ಕೆ ಸೈದ್ಧಾಂತಿಕ ಬೆಂಬಲ ನೀಡಿವೆ ಎಂಬ ಗೃಹ ಸಚಿವರ ಆರೋಪದ ಪ್ರಶ್ನೆಗೆ ಉತ್ತರಿಸಿದ ಅವರು ಅದರ ಅರ್ಥವೇನು ಎಂದು ನನಗೆ ತಿಳಿದಿಲ್ಲ. ಅವರು ವಿವರಿಸಲಿ ಎಂದು ಹೇಳಿದರು.
"ನಗರ ನಕ್ಸಲೀಯರು ಅಥವಾ ಗ್ರಾಮೀಣ ನಕ್ಸಲೀಯರು ಸರ್ಕಾರದ ನೀತಿಗಳಿಗೆ ಸವಾಲು ಹಾಕುತ್ತಿದ್ದಾರೆ. ಆದರೆ ಬಲಪಂಥೀಯ ಉಗ್ರಗಾಮಿಗಳ ಬಗ್ಗೆ ಏನು? ಅವರು ಭಾರತೀಯ ರಾಷ್ಟ್ರೀಯತೆಯನ್ನು ಮರುವ್ಯಾಖ್ಯಾನಿಸಲು ಬಯಸುತ್ತಾರೆ. ಭಾರತೀಯ ಇತಿಹಾಸವನ್ನು ಪುನಃ ಬರೆಯಲು ಬಯಸುತ್ತಾರೆ. ಯಾವುದು ಅಪಾಯಕಾರಿ?" ಎಂದು ರಾಜಾ ಪ್ರಶ್ನಿಸಿದರು.
Advertisement