
ಚಂಡೀಗಢ: ಕೇಂದ್ರಾಡಳಿತ ಪ್ರದೇಶದ ಆಡಳಿತವು ಉಳಿದಿದ್ದ ಏಕೈಕ ಕೊಳೆಗೇರಿಯನ್ನು ಮಂಗಳವಾರ ತೆರವುಗೊಳಿಸುವ ಮೂಲಕ ಚಂಡೀಗಢ ದೇಶದ ಮೊದಲ ಕೊಳೆಗೇರಿ ಮುಕ್ತ ನಗರ ಎಂಬ ಗೌರವಕ್ಕೆ ಪಾತ್ರವಾಗಿದೆ.
ಚಂಡೀಗಢ ಆಡಳಿತವು ಇಂದು ತನ್ನ ವ್ಯಾಪ್ತಿಯಲ್ಲಿ ಉಳಿದಿದ್ದ ಕೊನೆಯ ಕೊಳೆಗೇರಿ ಶಹಪುರ್ ಕಾಲೋನಿಯನ್ನು ತೆರವುಗೊಳಿಸಿದ್ದು, ಇದರೊಂದಿಗೆ ಚಂಡೀಗಢ ಈಗ ಭಾರತದ ಮೊದಲ ಕೊಳೆಗೇರಿ ಮುಕ್ತ ನಗರವಾಗಿದೆ.
ಇಂದು ಬೆಳಗ್ಗೆ 7 ಗಂಟೆಯ ಸುಮಾರಿಗೆ ತೆರವು ಕಾರ್ಯಾಚರಣೆಯನ್ನು ಆರಂಭಿಸಲಾಯಿತು ಮತ್ತು ಅದು ದಿನವಿಡೀ ಮುಂದುವರೆಯಿತು ಎಂದು ಎಸ್ಟೇಟ್ ಕಚೇರಿಯ ಜಾರಿ ವಿಭಾಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.
"ಹೆಚ್ಚಿನ ಗುಡಿಸಲುಗಳನ್ನು ತೆರವುಗೊಳಿಸಲಾಗಿದೆ ಮತ್ತು ಹೊಸ ಅತಿಕ್ರಮಣವನ್ನು ತಡೆಯಲು ತಕ್ಷಣವೇ ಬೇಲಿ ಹಾಕಲಾಗುವುದು" ಎಂದು ಅವರು ತಿಳಿಸಿದ್ದಾರೆ.
ಸರ್ಕಾರಿ ಭೂಮಿಯಿಂದ ಎಲ್ಲಾ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ ಮತ್ತು ದೊಡ್ಡ ಪ್ರಮಾಣದ ಪುನರ್ವಸತಿ ಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದರೊಂದಿಗೆ ಕೊಳೆಗೇರಿ ನಿರ್ಮೂಲನಾ ಉಪಕ್ರಮದ ಅಂತಿಮ ಹಂತವನ್ನು ಪೂರ್ಣಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಚಂಡೀಗಢ ಆಡಳಿತವು ಸೆಕ್ಟರ್ 38 ರ ಶಹಪುರ್ ಕಾಲೋನಿಯಲ್ಲಿರುವ ಕೊಳೆಗೇರಿಯನ್ನು ತೆರವುಗೊಳಿಸಿತು. ಇದು 4 ರಿಂದ 4.5 ಎಕರೆಗಳಲ್ಲಿ ಹರಡಿಕೊಂಡಿತ್ತು ಮತ್ತು ಸುಮಾರು 250 ಕೋಟಿ ರೂ. ಮೌಲ್ಯದ್ದಾಗಿದೆ.
ಈ ಕೊಳಗೇರಿಯಲ್ಲಿ ಸುಮಾರು 300 ಗುಡಿಸಲುಗಳು ಮತ್ತು ಮನೆಗಳು ಇದ್ದವು. ಸುಮಾರು 1,000 ನಿವಾಸಿಗಳು ಇಲ್ಲಿ ವಾಸಿಸುತ್ತಿದ್ದರು.
Advertisement