
ಪಾಟ್ನಾ: ವಿಧಾನಸಭಾ ಚುನಾವಣೆಗೆ ಮುನ್ನ ಬಿಹಾರದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR)ಯ ನಂತರ ಚುನಾವಣಾ ಆಯೋಗ(EC) ಮಂಗಳವಾರ ಮತದಾರರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪರಿಷ್ಕೃತ ಪಟ್ಟಿಯನ್ನು ಚುನಾವಣಾ ಆಯೋಗ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಮಾಡಿದೆ. ಮತದಾರರು ತಮ್ಮ ವಿವರಗಳನ್ನು https://voters.eci.gov.in ನಲ್ಲಿ ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು ಎಂದು ತಿಳಿಸಿದೆ.
ಬಿಹಾರ ಮುಖ್ಯ ಚುನಾವಣಾ ಅಧಿಕಾರಿ(CEO) ಕಚೇರಿಯ ಪ್ರಕಾರ, ಬಿಹಾರದಲ್ಲಿ 7,41,92,357 ನೋಂದಾಯಿತ ಮತದಾರರಿದ್ದಾರೆ. ಅವರಲ್ಲಿ 3,92,07,604 ಪುರುಷರು ಮತದಾರರು ಮತ್ತು 3,49,82,828 ಮಹಿಳೆಯರಿದ್ದಾರೆ. ಇದಲ್ಲದೆ, ರಾಜ್ಯದಲ್ಲಿ ಒಟ್ಟು 1,725 ತೃತೀಯ ಲಿಂಗ ಮತದಾರರಿದ್ದಾರೆ.
ಅಧಿಕೃತ ದಾಖಲೆಗಳ ಪ್ರಕಾರ, 4,03,985 ಮತದಾರರು 85 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ, ಯುವ ಮತದಾರರ ಸಂಖ್ಯೆ (18-19 ವರ್ಷ ವಯಸ್ಸಿನವರು) 14,01,150 ರಷ್ಟಿದೆ. 7,20,709 ಮತದಾರರು ದೈಹಿಕ ಅಂಗವೈಕಲ್ಯ ಹೊಂದಿದ್ದಾರೆ.
ಚುನಾವಣಾ ಆಯೋಗದ ಪ್ರಕಾರ, 36,000ಕ್ಕೂ ಹೆಚ್ಚು ಮತದಾರರು ತಮ್ಮ ಹೆಸರುಗಳನ್ನು ಸೇರಿಸಲು ಅರ್ಜಿ ಸಲ್ಲಿಸಿದ್ದರೆ. 2.17 ಲಕ್ಷ ಮತದಾರರು ಹೆಸರುಗಳನ್ನು ತೆಗೆದುಹಾಕಲು ಅರ್ಜಿ ಸಲ್ಲಿಸಿದ್ದಾರೆ. ಅಗತ್ಯ ದಾಖಲೆಗಳನ್ನು ಸಲ್ಲಿಸದಿದ್ದಕ್ಕಾಗಿ ಸುಮಾರು ಮೂರು ಲಕ್ಷ ಮತದಾರರಿಗೆ ನೋಟಿಸ್ ನೀಡಲಾಗಿದೆ.
ಅಂತಿಮ ಮತದಾರರ ಪಟ್ಟಿಯಲ್ಲಿ, SIR ಸಮಯದಲ್ಲಿ ಗುರುತಿಸಲಾದ ಮೃತ, ಸ್ಥಳಾಂತರಗೊಂಡ ಮತ್ತು ನಕಲಿ ಮತದಾರರ ಹೆಸರುಗಳನ್ನು ಸೇರಿಸಲಾಗಿಲ್ಲ.
ಬಿಹಾರ ಸಿಇಒ ಕಚೇರಿಯ ಪ್ರಕಾರ, ಮತದಾರರ ಪಟ್ಟಿಯ ಭೌತಿಕ ಪ್ರತಿಗಳನ್ನು ಎಲ್ಲಾ ಜಿಲ್ಲಾ ಚುನಾವಣಾ ಅಧಿಕಾರಿ-ಕಮ್-ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ಲಭ್ಯವಾಗುವಂತೆ ಮಾಡಲಾಗುವುದು. ಅಂತಿಮ ಪಟ್ಟಿಯನ್ನು ಎಲ್ಲಾ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ರಾಜಕೀಯ ಪಕ್ಷಗಳಿಗೂ ಒದಗಿಸಲಾಗುವುದು ಎಂದು ತಿಳಿಸಿದೆ.
ರಾಜ್ಯ ವಿಧಾನಸಭಾ ಚುನಾವಣೆಯನ್ನು ಈ ಮತದಾರರ ಪಟ್ಟಿಯನ್ನು ಬಳಸಿಕೊಂಡು ನಡೆಸಲಾಗುತ್ತದೆ.
Advertisement