

ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದ ಸಂದರ್ಭವನ್ನು ಭಾರತದ ರಾಜತಾಂತ್ರಿಕತೆ ನಿರ್ವಹಿಸಿದ ರೀತಿಯನ್ನು ವಿಪಕ್ಷ ಕಾಂಗ್ರೆಸ್ ಟೀಕಿಸುತ್ತಿದ್ದರೆ, ಕಾಂಗ್ರೆಸ್ ನ ನಾಯಕರೊಬ್ಬರು ಸರ್ಕಾರವನ್ನು ಹಾಡಿಹೊಗಳುವ ಮೂಲಕ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದಾರೆ.
ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಗುರುವಾರ ಪಶ್ಚಿಮ ಏಷ್ಯಾ ಸಂಕಷ್ಟದ ಸಂದರ್ಭದಲ್ಲಿ ಭಾರತದ ರಾಜತಾಂತ್ರಿಕ ನಿರ್ವಹಣೆಯನ್ನು “ಪ್ರೌಢ ಮತ್ತು ನಿಪುಣ” ಎಂದು ಕೊಂಡಾಡಿದ್ದಾರೆ.
ಸರ್ಕಾರದ ನಡೆ ದೇಶವನ್ನು ಅನೇಕ “ಸಂಭಾವ್ಯ ಸವಾಲುಗಳು ಮತ್ತು ಅಪಾಯಗಳಿಂದ” ದೂರವಿರಿಸಲು ಸಹಾಯ ಮಾಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅವರು ಭಾರತ ಗ್ಲೋಬಲ್ ಸೌತ್ ರಾಷ್ಟ್ರಗಳು ಹಾಗೂ ತಂತ್ರಜ್ಞಾನದ ದೃಷ್ಟಿಯಿಂದ ಪ್ರಮುಖ ಸಹಭಾಗಿತ್ವ ಹೊಂದಿರುವ ದೇಶಗಳನ್ನು ಒಗ್ಗೂಡಿಸಿ, ಆ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಪುನಃ ಸ್ಥಾಪಿಸಲು ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.
ಇಲ್ಲಿಯವರೆಗೆ ನವದೆಹಲಿಯು ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿದ ಶರ್ಮಾ, “ಸಂಕಷ್ಟದ ಈ ಅವಧಿಯಲ್ಲಿ ಭಾರತದ ರಾಜತಾಂತ್ರಿಕ ಹಸ್ತಕ್ಷೇಪ ಪ್ರೌಢತೆ ಮತ್ತು ನೈಪುಣ್ಯತೆಯನ್ನು ತೋರಿಸಿದೆ; ಅನೇಕ ಸಾಧ್ಯತೆಯ ಮೈನ್ಫೀಲ್ಡ್‌ಗಳನ್ನು (ಅಪಾಯಕರ ಪರಿಸ್ಥಿತಿಗಳನ್ನು) ತಪ್ಪಿಸಿದೆ” ಎಂದು ಹೇಳಿದರು.
“ಭಾರತದ ಪ್ರತಿಕ್ರಿಯೆಗೆ ರಾಷ್ಟ್ರೀಯ ಒಗ್ಗಟ್ಟು ಮತ್ತು ದೃಢಸಂಕಲ್ಪದ ಬೆಂಬಲ ಅಗತ್ಯ. ಅನಿಶ್ಚಿತತೆ ಮತ್ತು ಅಸ್ಥಿರತೆಯಿಂದ ಕೂಡಿದ ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಎಲ್ಲಾ ಪಕ್ಷಗಳ ಸಭೆಯನ್ನು ಕರೆದಿದ್ದು, ರಾಜಕೀಯ ಪಕ್ಷಗಳ ನಾಯಕರಿಗೆ ಪರಿಸ್ಥಿತಿ ಮತ್ತು ನೀತಿನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದೆ” ಎಂದು ಅವರು ಹೇಳಿದರು.
“ಈ ರಾಷ್ಟ್ರೀಯ ಸಂವಾದ ನಿರಂತರವಾಗಿರಬೇಕು. ರಾಷ್ಟ್ರೀಯ ಹಿತಾಸಕ್ತಿಯನ್ನು ಕೇಂದ್ರಬಿಂದುವಾಗಿಟ್ಟುಕೊಂಡ ಪ್ರೌಢ, ಜವಾಬ್ದಾರಿಯುತ ಪ್ರತಿಕ್ರಿಯೆ ಮತ್ತು ರಾಷ್ಟ್ರೀಯ ಏಕತೆ ಇಂದಿನ ಅವಶ್ಯಕತೆ” ಎಂದು ಕಾಂಗ್ರೆಸ್ ನಾಯಕರು ತಮ್ಮ ಹೇಳಿಕೆಯಲ್ಲಿ ಒತ್ತಿ ಹೇಳಿದರು.
ಯುಪಿಎ ಆಡಳಿತಾವಧಿಯಲ್ಲಿ ಶರ್ಮಾ ವಾಣಿಜ್ಯ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳನ್ನು ನಿರ್ವಹಿಸಿದ್ದ ಅನುಭವ ಹೊಂದಿದ್ದಾರೆ. “ನಿಯಮಾಧಾರಿತ ಬಹುಪಕ್ಷೀಯ ವ್ಯವಸ್ಥೆಯ ಕುಸಿತ ಮತ್ತು ಜಾಗತಿಕ ಸಂಕಷ್ಟ ನಿರ್ವಹಣಾ ವ್ಯವಸ್ಥೆಯ ದುರ್ಬಲಿಕೆಯನ್ನು ವಿಶ್ವ ಸಮುದಾಯ ಮೌನವಾಗಿ ನೋಡುವುದಕ್ಕೆ ಸಾಧ್ಯವಿಲ್ಲ. ಶಾಂತಿಯ ಮೇಲಿನ ಬದ್ಧತೆ ಮತ್ತು ನೈತಿಕ ಪ್ರಾಮಾಣಿಕತೆಯಿಂದ ಭಾರತ ಇತಿಹಾಸಪೂರ್ವಕವಾಗಿ ಜಗತ್ತಿನ ಗೌರವವನ್ನು ಗಳಿಸಿದೆ. ವಿಶೇಷವಾಗಿ ಯುವ ಪೀಳಿಗೆಯ ಭವಿಷ್ಯ ಸೇರಿದಂತೆ ಬಹಳಷ್ಟು ವಿಷಯಗಳು ಈಗ ಪಣಕ್ಕಿರುತ್ತವೆ” ಎಂದು ಅವರು ಹೇಳಿದರು.
Advertisement