

ಮುಂಬೈ: ಆರಂಭವಾದ ಕೆಲವೇ ದಿನಗಳಲ್ಲಿ ಸಾಮಾಜಿಕ ಮಾಧ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ವಿಡಂಬನಾತ್ಮಕ ಡಿಜಿಟಲ್ ಸಂಘಟನೆಯಾದ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ), ನೀಟ್ ಅಕ್ರಮದ ವಿರುದ್ಧ ದೆಹಲಿಯ ಜಂತರ್ ಮಂತರ್ ನಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಇದೀಗ ಸಿಜೆಪಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಿದ್ಧವಾಗುತ್ತಿದ್ದು, "ಜಂತರ್-ಮಂತರ್ ಸೀಸನ್ 2" ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಬುಧವಾರ ಘೋಷಿಸಿದ್ದಾರೆ.
‘ಸೀಸನ್ 1’ ಕಳೆದ ತಿಂಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ನೇತೃತ್ವದ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಯನ್ನು ನೆನಪಿಸುತ್ತದೆ. ಪ್ರಶ್ನೆ ಪತ್ರಿಕೆ ಸೋರಿಕೆ, ವಿದ್ಯಾರ್ಥಿಗಳ ಆತ್ಮಹತ್ಯೆ ಮತ್ತು ಶೈಕ್ಷಣಿಕ ಸುಧಾರಣೆ ಸಂಬಂಧ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿತ್ತು.
"ಜಂತರ್ ಮಂತರ್ ಸೀಸನ್ 2" ಹೇಳಿಕೆ, ಕೇವಲ ದೆಹಲಿ ನಡೆಯುವ ಮತ್ತೊಂದು ಪ್ರತಿಭಟನೆಗೆ ಸೀಮಿತವಾಗಿಲ್ಲ ಎಂದು ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್ ಹೇಳಿದ್ದಾರೆ. "ಇದು ಸ್ವತಃ ಸೀಸನ್ 2" ಎಂದು ಸೌರವ್ ದಾಸ್ ANI ಗೆ ತಿಳಿಸಿದ್ದಾರೆ.
"ಇಂತಹ ಅಸಮರ್ಥ ಸರ್ಕಾರಗಳು ಮತ್ತು ಅಧಿಕಾರಿಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಸಿಜೆಪಿ, ಸಾರ್ವಜನಿಕರು ಏನು ಹೇಳುತ್ತಾರೆಂದು ಕೇಳಲು ನಾವು ಈಗ ರಾಷ್ಟ್ರವ್ಯಾಪಿ 'ಆಂದೋಲನ'ವನ್ನು ಪ್ರಾರಂಭಿಸುತ್ತಿದ್ದೇವೆ. ಸ್ವಾತಂತ್ರ್ಯ ದಿನಾಚರಣೆಯಿಂದ ಆರಂಭವಾಗುವ ಈ ಅಭಿಯಾನದಲ್ಲಿ ಶಿಕ್ಷಣದ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ.