

ನವದೆಹಲಿ: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಿಂದ ಸಿಸಿಬಿ ನಡೆಸಿದ ದಾಳಿಯ ವೇಳೆ ಮೊಬೈಲ್ ಫೋನ್ ವಶಪಡಿಸಿಕೊಂಡಿರುವುದು ಭಾರೀ ಸುದ್ದಿಯಾಗಿದೆ.
ಈ ಬಗ್ಗೆ ನಿನ್ನೆ ದೆಹಲಿಯಲ್ಲಿ ಸುದ್ದಿಗೋಷ್ಠಿ ವೇಳೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಕೇಳಿದಾಗ. ಈ ಎಲ್ಲ ವಿಚಾರಗಳ ಬಗ್ಗೆ ನನಗೆ ತಿಳಿದಿಲ್ಲ. ಅದು ನನ್ನ ಕಾಳಜಿಯ ವಿಷಯವೂ ಅಲ್ಲ. ಇದು ಸರ್ಕಾರ ಮತ್ತು ಗೃಹ ಇಲಾಖೆಯ ಜವಾಬ್ದಾರಿ. ಯಾವುದಾದರೂ ಅಕ್ರಮ ಚಟುವಟಿಕೆ ನಡೆದಿದ್ದರೆ, ಅವರು ಕ್ರಮ ಕೈಗೊಳ್ಳುತ್ತಾರೆ. ನೀವು ನನ್ನನ್ನು ಏಕೆ ಕೇಳುತ್ತೀರಿ ಎಂದು ಸುದ್ದಿಗಾರರನ್ನು ಪ್ರಶ್ನಿಸಿದರು.
ಜೈಲಿನೊಳಗೆ ನಡೆಯುವ ಯಾವುದೇ ವಿಚಾರವಾಗಿರಲಿ, ಅದು ಕೇಂದ್ರ ಕಾರಾಗೃಹವಾಗಿರಲಿ ಅಥವಾ ಪರಪ್ಪನ ಅಗ್ರಹಾರವಾಗಿರಲಿ, ಈ ಎಲ್ಲ ವಿಷಯಗಳನ್ನು ಕಟ್ಟುನಿಟ್ಟಾಗಿ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದು, ಗೃಹ ಇಲಾಖೆಯದ್ದು, ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಹೇಳಿದರು.
ಕಾವೇರಿ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ರಕ್ಷಿಸುವಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಪದೇಪದೇ ವಿಫಲವಾಗಿದೆ. ತನ್ನದೇ ಕಾನೂನು ತಂಡವನ್ನು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಿಂದ ದೂರವಿಟ್ಟಿದೆ ಎಂದು ಆರೋಪಿಸಿದ್ದಾರೆ.
ಕಾವೇರಿ ನೀರಿನ ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಕರ್ನಾಟಕ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಆದರೆ, ತಮಿಳುನಾಡು ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ನಿರಂತರವಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಮುಖ್ಯಮಂತ್ರಿಯಾಗುವ ಮೊದಲು ಮೂರು ವರ್ಷಗಳ ಕಾಲ ಕರ್ನಾಟಕದ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರ ಸಿದ್ಧತೆಯನ್ನೂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಕಾವೇರಿ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ಪ್ರತಿಪಾದಿಸುವುದಕ್ಕಿಂತ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿಯಾಗುವುದರಲ್ಲೇ ಡಿ ಕೆ ಶಿವಕುಮಾರ್ ಹೆಚ್ಚು ಗಮನಹರಿಸಿದ್ದರು ಎಂದರು.