

ನವದೆಹಲಿ: ಆಗಸ್ಟ್ 14 ಇತಿಹಾಸದ ಅತ್ಯಂತ ಕ್ರೂರ ಅಧ್ಯಾಯವೊಂದಕ್ಕೆ ಸಾಕ್ಷಿಯಾಗಿದೆ. "ಕಾಂಗ್ರೆಸ್‌ನ ಕೊಡುಗೆಯಾಗಿರುವ" ದೇಶ ವಿಭಜನೆಯ ಗಾಯವನ್ನು ಇತಿಹಾಸ ಎಂದಿಗೂ ಮರೆಯುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಂದೇಶವೊಂದನ್ನು ಪೋಸ್ಟ್ ಮಾಡಿರುವ ಶಾ, 1947ರ ಆಗಸ್ಟ್ 14 ಇತಿಹಾಸದ ಅತ್ಯಂತ ಕ್ರೂರ ಅಧ್ಯಾಯವೊಂದಕ್ಕೆ ಸಾಕ್ಷಿಯಾಗಿದೆ. ಈ ಸಂದರ್ಭದಲ್ಲಿ ಲಕ್ಷಾಂತರ ಜನರು ಅಮಾನವೀಯ ಯಾತನೆಯನ್ನು ಅನುಭವಿಸಿ ತಮ್ಮ ಪ್ರಾಣ ಕಳೆದುಕೊಂಡರು. ಕೋಟ್ಯಂತರ ಜನರು ತಮ್ಮ ಮನೆ, ಆಸ್ತಿ ಹಾಗೂ ಪ್ರೀತಿಪಾತ್ರರನ್ನು ತೊರೆದು ನಿರಾಶ್ರಿತರಾಗಬೇಕಾಯಿತು ಎಂದು ತಿಳಿಸಿದ್ದಾರೆ.
"ಕಾಂಗ್ರೆಸ್‌ನ ಕೊಡುಗೆಯಾಗಿರುವ ದೇಶದ ವಿಭಜನೆಯ ಈ ಗಾಯವನ್ನು ಇತಿಹಾಸ ಎಂದಿಗೂ ಮರೆಯುವುದಿಲ್ಲ. ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರಿಗೆ ಮತ್ತು ದೌರ್ಜನ್ಯಗಳ ವಿರುದ್ಧ ಹೋರಾಡಿದವರಿಗೆ ನಾನು ಗೌರವಪೂರ್ವಕ ಸಂತಾಪ ಸಲ್ಲಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.
'ವಿಭಜನೆಯ ಭೀಕರತೆಯ ಸ್ಮರಣಾ ದಿನ'ದ (Partition Horrors Remembrance Day) ಮೂಲಕ ಮೋದಿ ಸರ್ಕಾರವು ಈ ದುರಂತದ ನೆನಪುಗಳನ್ನು ಯುವಜನರಿಗೆ ತಲುಪಿಸುತ್ತಿದೆ. ಇದರಿಂದಾಗಿ ದೇಶವನ್ನು ಮತ್ತೆ ವಿಭಜಿಸಲು ಬಯಸುವ ಶಕ್ತಿಗಳು ಎಂದಿಗೂ ಯಶಸ್ವಿಯಾಗುವುದಿಲ್ಲ ಮತ್ತು 'ಏಕ ಭಾರತ, ಶ್ರೇಷ್ಠ ಭಾರತ' (One India, Excellent India) ನಮ್ಮ ಪರಮ ಗುರಿಯಾಗುತ್ತದೆ ಎಂದು ಶಾ ಹೇಳಿದ್ದಾರೆ.