

ನವದೆಹಲಿ: ಕೇಂದ್ರ ಸರ್ಕಾರ ಶುಕ್ರವಾರ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ಗೆ ಮನೋಜ್ ಬಾಜ್ ಪೇಯಿ ಅಭಿನಯದ 'ಘೂಸ್ ಖೋರ್ ಪಂಡತ್' ಚಿತ್ರದ ಟೀಸರ್ ಮತ್ತು ಇತರ ಪ್ರಚಾರ ವಿಷಯಗಳನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕುವಂತೆ ಕೇಳಿಕೊಂಡಿದೆ ಎಂದು ಭಾರತೀಯ ಜನತಾ ಪಕ್ಷ ತಿಳಿಸಿದೆ.
ಚಿತ್ರದ ಶೀರ್ಷಿಕೆಗೆ ಬ್ರಾಹ್ಮಣ ಸಮುದಾಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಟೀಸರ್ ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಶೀರ್ಷಿಕೆಯನ್ನು "ಜಾತಿವಾದಿ" ಮತ್ತು ಆಕ್ಷೇಪಾರ್ಹ ಎಂದು ಟೀಕಿಸಿದ್ದರು.
ಈ ಸಂಬಂಧ ಲಖನೌನ ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ದೂರು ದಾಖಲಾದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್‌ಎಚ್‌ಆರ್‌ಸಿ) ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನೋಟಿಸ್ ಸಹ ನೀಡಿದೆ.
"ಈ ವಿಷಯದಲ್ಲಿ ತ್ವರಿತ ಕ್ರಮ ಕೈಗೊಂಡಿರುವ ಕೇಂದ್ರವು, ಟೀಸರ್ ಮತ್ತು ಚಿತ್ರದ ಎಲ್ಲಾ ಇತರ ಪ್ರಚಾರ ವಿಷಯಗಳನ್ನು ತೆಗೆದುಹಾಕುವಂತೆ ನೆಟ್‌ಫ್ಲಿಕ್ಸ್‌ಗೆ ಸೂಚಿಸಿದೆ. ಯಾವುದೇ ಸಮಾಜಕ್ಕೆ ವಿರುದ್ಧವಾದ ಇಂತಹ ವಿಷಯವು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ" ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
"ಕೇಂದ್ರದ ತ್ವರಿತ ಮತ್ತು ನಿರ್ಣಾಯಕ ಕ್ರಮವನ್ನು ನಾವು ಶ್ಲಾಘಿಸುತ್ತೇವೆ! ಅವಹೇಳನಕಾರಿ ಚಿತ್ರ 'ಘೂಸ್ ಖೋರ್ ಪಂಡತ್' ನಂತಹ ಆಕ್ಷೇಪಾರ್ಹ ವಿಷಯವನ್ನು ವೇದಿಕೆಯಿಂದ ತೆಗೆದುಹಾಕಲಾಗಿದೆ. ಅಲ್ಲದೆ, ಪ್ರಕರಣದಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ" ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ X ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement