

ನವದೆಹಲಿ: ನಿನ್ನೆ ಗುರುವಾರ ರಾಜ್ಯಸಭೆಯಲ್ಲಿ ಘೋಷಣೆ ಕೂಗುವಿಕೆ ಮತ್ತು ವಿರೋಧ ಪಕ್ಷದ ಸದಸ್ಯರ ಸಭಾತ್ಯಾಗದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ "ಆರೋಗ್ಯ ರಹಸ್ಯ"ವನ್ನು ಬಹಿರಂಗಪಡಿಸುತ್ತಾ ಹಾಸ್ಯ ಮತ್ತು ತೀಕ್ಷ್ಣವಾದ ರಾಜಕೀಯ ವಾಗ್ದಾಳಿಯನ್ನು ವಿರೋಧ ಪಕ್ಷದವರ ಮೇಲೆ ಪ್ರಯೋಗಿಸಿದರು.
ಸದನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಒಮ್ಮೆ ಯಾರೋ ನನ್ನನ್ನು ಕೇಳಿದರು, 'ಮೋದಿ ಜಿ, ನಿಮ್ಮ ಉತ್ತಮ ಆರೋಗ್ಯದ ರಹಸ್ಯವೇನು?' ನಾನು ಉತ್ತರಿಸಿದೆ, 'ನಾನು ಪ್ರತಿದಿನ ಎರಡು ಕೆಜಿ ನಿಂದನೆ ಸೇವಿಸುತ್ತೇನೆ ಎಂದು ಹೇಳಿದೆ ಎಂದು ಹಾಸ್ಯಭರಿತವಾಗಿ ಹೇಳಿದರು. ಆಗ ಸದನ ನಗೆಗಡಲಲ್ಲಿ ತೇಲಿತು.
ನಂತರ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ದಶಕಗಳಿಂದ ಕಾಂಗ್ರೆಸ್ ದುರಾಡಳಿತ ನಡೆಸುತ್ತಿದೆ. ಕಳೆದ ದಶಕದಲ್ಲಿ ಎನ್‌ಡಿಎ ಮೈತ್ರಿಕೂಟದ ಹೆಚ್ಚಿನ ಕೆಲಸವು ಹಿಂದಿನ ಯುಪಿಎ ಸರ್ಕಾರದಲ್ಲಿ ಮಾಡಿದ್ದ ತಪ್ಪುಗಳನ್ನು ಸರಿಪಡಿಸುವುದಾಗಿತ್ತು ಎಂದು ಆರೋಪಿಸಿದರು.
ವಿರೋಧ ಪಕ್ಷದ ಘೋಷಣೆಗಳನ್ನು ಮತ್ತಷ್ಟು ಟೀಕಿಸಿದ ಪ್ರಧಾನಿ, 'ಮೋದಿ ತೇರಿ ಕಬರ್ ಖುದೇಗಿ' ಎಂದು ಹೇಳುತ್ತಾರೆ. ಇದು ಕೇವಲ ಘೋಷಣೆಯಲ್ಲ, ನನ್ನ ಮೇಲಿನ ತೀವ್ರ ದ್ವೇಷವನ್ನು ತೋರಿಸುತ್ತದೆ.
ವಿರೋಧ ಪಕ್ಷಗಳು ಒಳನುಸುಳುಕೋರರನ್ನು ರಕ್ಷಿಸುತ್ತವೆ, ಪ್ರಧಾನಿ ಹುದ್ದೆಯು "ಶಾಹಿ ಪರಿವಾರ" ಕ್ಕೆ ಮಾತ್ರ ಸೇರಿದ್ದು ಎಂದು ಕಾಂಗ್ರೆಸ್ ನಂಬುತ್ತದೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷವು ಯಾವಾಗಲೂ ಈ ದೇಶದ ನಾಗರಿಕರನ್ನು ಒಂದು ಸಮಸ್ಯೆಯಾಗಿ ಪರಿಗಣಿಸಿದೆ. ಒಮ್ಮೆ, ಇಂದಿರಾ ಗಾಂಧಿ ಅವರು ಇರಾನ್‌ಗೆ ಭೇಟಿ ನೀಡಿದ್ದ ವೇಳೆ ಭಾಷಣದ ಸಮಯದಲ್ಲಿ, ಅವರ ತಂದೆ ನೆಹರೂ ಅವರೊಂದಿಗಿನ ಸಂಭಾಷಣೆಯನ್ನು ಉಲ್ಲೇಖಿಸಿದ್ದನ್ನು ನಾನು ಇಲ್ಲಿ ಹೇಳುತ್ತೇನೆ. ಯಾರಾದರೂ ನನ್ನ ತಂದೆಗೆ ಎಷ್ಟು ಸಮಸ್ಯೆಗಳಿವೆ ಎಂದು ಕೇಳಿದಾಗ, ಅವರು 35 ಕೋಟಿ ಎಂದು ಉತ್ತರಿಸುತ್ತಾರೆ ಎಂದಿದ್ದರು.
ಆ ಸಮಯದಲ್ಲಿ ಭಾರತ ದೇಶದ ಜನಸಂಖ್ಯೆ 35 ಕೋಟಿಯಾಗಿತ್ತು ಎಂದು ಮೋದಿ ಹೇಳಿದರು.
Advertisement