

ಚೆನ್ನೈ: ಡಿಎಂಡಿಕೆ ಜೊತೆ ಚುನಾವಣಾ ಒಪ್ಪಂದ ಮಾಡಿಕೊಂಡ ಕೆಲವು ದಿನಗಳ ನಂತರ, ತನ್ನ ಮಿತ್ರಪಕ್ಷಗಳೊಂದಿಗೆ ಮಾತುಕತೆ ನಡೆಸಲು ಪಕ್ಷದ ಹಿರಿಯ ನಾಯಕ ಟಿ.ಆರ್. ಬಾಲು ನೇತೃತ್ವದಲ್ಲಿ 7 ಸದಸ್ಯರ ಸೀಟು ಹಂಚಿಕೆ ಸಮಿತಿಯನ್ನು ರಚಿಸುವುದಾಗಿ ಆಡಳಿತಾರೂಢ ಡಿಎಂಕೆ ಶನಿವಾರ ಪ್ರಕಟಿಸಿದೆ.
ಡಿಎಂಡಿಕೆ ಗುರುವಾರ ಅಧಿಕೃತವಾಗಿ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟ(ಎಸ್‌ಪಿಎ) ಸೇರ್ಪಡೆಯಾಗಿದೆ. ಈ ಕ್ರಮವು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆಯನ್ನು ಸಾಮೂಹಿಕವಾಗಿ ಎದುರಿಸಲು ವಿಜಯಕಾಂತ್ ಸ್ಥಾಪಿಸಿದ ಪಕ್ಷವನ್ನು ಎನ್‌ಡಿಎಗೆ ಸೆಳೆಯಲು ಪ್ರಯತ್ನಿಸುತ್ತಿದ್ದ ಪ್ರತಿಸ್ಪರ್ಧಿ ಎಐಎಡಿಎಂಕೆಗೆ ದೊಡ್ಡ ಹೊಡೆತ ನೀಡಿದೆ.
ಫೆಬ್ರವರಿ 22 ರಿಂದ ಡಿಎಂಕೆ, ತನ್ನ ಮಿತ್ರಪಕ್ಷಗಳೊಂದಿಗೆ ಸೀಟು ಹಂಚಿಕೆ ಮಾತುಕತೆಗಳನ್ನು ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲವೊಂದು ತಿಳಿಸಿದೆ.
ಡಿಎಂಡಿಕೆಗೆ ಅವಕಾಶ ನೀಡುವುದರ ಜೊತೆಗೆ, ಈ ಚುನಾವಣೆಗೆ ಪಕ್ಷವು ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳನ್ನು ಹಂಚಿಕೆ ಮಾಡುವ ಸಾಧ್ಯತೆಯಿದೆ.
ಡಿಎಂಕೆಯ ಮಿತ್ರಪಕ್ಷ ಎಂಡಿಎಂಕೆ ಮುಖ್ಯಸ್ಥ ವೈಕೋ ಅವರು, ದ್ರಾವಿಡ ಪ್ರಮುಖ ಪಕ್ಷವು ತನ್ನದೇ ಆದ ಸಂಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಮರಳುತ್ತದೆ ಎಂದು ಹೇಳಿದ್ದಾರೆ.
"2026 ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತೆ ಸರ್ಕಾರ ರಚಿಸುತ್ತಾರೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ" ಎಂದು ವೈಕೋ ತಿಳಿಸಿದ್ದಾರೆ.
ಮಿತ್ರಪಕ್ಷಗಳೊಂದಿಗೆ ಮಾತುಕತೆ ಆರಂಭಿಸಲು ಈ ಸಮಿತಿ ರಚಿಸಲಾಗಿದೆ. ಪಕ್ಷದ ಖಜಾಂಚಿ ಬಾಲು ಈ ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಡಿಎಂಕೆಯ ಪ್ರಧಾನ ಕಾರ್ಯದರ್ಶಿ ಕೆ.ಎನ್. ನೆಹರು, ಉಪ ಪ್ರಧಾನ ಕಾರ್ಯದರ್ಶಿಗಳಾದ ತಿರುಚಿ ಶಿವ, ಎ. ರಾಜ, ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ ಮತ್ತು ಡಿಎಂಕೆಯ ಉನ್ನತ ಮಟ್ಟದ ಕಾರ್ಯಕಾರಿ ಸಮಿತಿ ಸದಸ್ಯರಾದ ಇ.ವಿ. ವೇಲು ಮತ್ತು ಎಂ.ಆರ್.ಕೆ. ಪನ್ನೀರ್‌ಸೆಲ್ವಂ ಸಮಿತಿಯ ಸದಸ್ಯರಾಗಿದ್ದಾರೆ.
ಡಿಎಂಕೆ ಸಮಿತಿ ಘೋಷಣೆ ಮಾಡಿದ ಕೆಲವೇ ಗಂಟೆಗಳ ನಂತರ, ವೈಕೊ ಅವರು ಸಹ ತಮ್ಮ ಎಂಡಿಎಂಕೆ ಪರವಾಗಿ ಸಮಿತಿಯೊಂದನ್ನು ರಚನೆ ಮಾಡಿದ್ದಾರೆ.
ನಾಲ್ವರು ಸದಸ್ಯರ ಈ ಸಮಿತಿಯಲ್ಲಿ ಎಂಡಿಎಂಕೆಯ ಕೌನ್ಸಿಲ್ ಅಧ್ಯಕ್ಷ ಅರ್ಜುನ ರಾಜ್, ಖಜಾಂಚಿ ಎಂ. ಸೆಂಥಿಲ್‌ದೀಪನ್, ಉನ್ನತ ಮಟ್ಟದ ಸಮಿತಿ ಸದಸ್ಯ ಸು ಜೀವನ್ ಮತ್ತು ಚುನಾವಣಾ ಕಾರ್ಯದರ್ಶಿ ವಿ. ಶೇಷನ್ ಇದ್ದಾರೆ.
"ಈ ಸಮಿತಿಯು 2026 ರ ವಿಧಾನಸಭಾ ಚುನಾವಣೆಗೆ ಜಾತ್ಯತೀತ ಪ್ರಗತಿಪರ ಮೈತ್ರಿಕೂಟದ ನೇತೃತ್ವ ವಹಿಸಿರುವ ಡಿಎಂಕೆ ಜೊತೆ ಮಾತುಕತೆ ನಡೆಸಲಿದೆ" ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ವೈಕೊ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement