

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ ಟಿವಿಕೆ ಸಂಸ್ಥಾಪಕ ಮತ್ತು ನಟ-ರಾಜಕಾರಣಿ ವಿಜಯ್ ಅವರು, ಡಿಎಂಕೆ ಅಧ್ಯಕ್ಷರ "ನಿಜವಾದ ಸ್ನೇಹಿತರು" "ಭ್ರಷ್ಟರಾಗಿದ್ದು, ರಾಜಕೀಯ ಲಾಭದ ಮೇಲೆ ಕಣ್ಣಿಟ್ಟಿದ್ದಾರೆ" ಎಂದು ಆರೋಪಿಸಿದ್ದಾರೆ.
ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಜಯ್, ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಸ್ಟಾಲಿನ್ ತಾವು ಹೊಂದಿದ್ದ ಆಸ್ತಿಗಳನ್ನು ಮತ್ತು ಈಗ ಅವರು ಹೊಂದಿರುವ ಆಸ್ತಿಯನ್ನು ಸಾರ್ವಜನಿಕವಾಗಿ ಘೋಷಿಸಬೇಕು ಮತ್ತು ಅವರ ಆರ್ಥಿಕ ಸ್ಥಿತಿಯನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಯವರ ಸಂಪತ್ತಿನ ಮೂಲವನ್ನು ಪ್ರಶ್ನಿಸಿದ ವಿಜಯ್, ಅದು ಕಠಿಣ ಪರಿಶ್ರಮದಿಂದ ಗಳಿಸಿದ್ದಾ ಅಥವಾ ಅಧಿಕಾರ ವಹಿಸಿಕೊಂಡ ನಂತರ ಗಳಿಸಿದ್ದಾ ಎಂದು ಪ್ರಶ್ನಿಸಿದರು. "ನೀವು ಅದನ್ನು ಬಹಿರಂಗವಾಗಿ ಘೋಷಿಸಬಹುದೇ?" ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿದಾಗಲೆಲ್ಲಾ "ಎಲ್ಲಾ ಭ್ರಷ್ಟರು ನಮ್ಮ ಮೇಲೆ ಕೆಸರು ಎರಚುತ್ತಾರೆ" ಎಂದರು.
ಇಂತಹ ದಾಳಿಗಳಿಗೆ ನಾನು ಹೆದರುವುದಿಲ್ಲ. ಜನರಿಗೆ ನಿಮ್ಮ ಹಿನ್ನೆಲೆ ಮತ್ತು ಉದ್ದೇಶ ಚೆನ್ನಾಗಿ ಗೊತ್ತಿದೆ. ಡಿಎಂಕೆ ಸರ್ಕಾರವು ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿದೆ ಎಂದು ಟಿವಿಕೆ ಮುಖ್ಯಸ್ಥರು ವಾಗ್ದಾಳಿ ನಡೆಸಿದರು.
ಆಡಳಿತಾರೂಢ ಡಿಎಂಕೆ ಮತ್ತು ಮುಖ್ಯಮಂತ್ರಿಗಳು ತಮ್ಮ ಅಧಿಕಾರಾವಧಿಯಲ್ಲಿ 2024–25ರಲ್ಲಿ ರಾಜ್ಯ ಎರಡಂಕಿಯ ಆರ್ಥಿಕ(ಶೇ. 11.19) ಬೆಳವಣಿಗೆ ಸಾಧಿಸಿದೆ ಎಂದು ಆಗಾಗ್ಗೆ ಹೇಳುತ್ತಿದ್ದಾರೆ. ಸ್ಟಾಲಿನ್ ಅವರ "ನಿಜವಾದ ಸ್ನೇಹಿತರು" ಭ್ರಷ್ಟರಾಗಿದ್ದು, ರಾಜಕೀಯ ಅವಕಾಶವಾದಿಗಳು ಎಂದರು.
ತಮಿಳುನಾಡನ್ನು ಸೂಪರ್‌ಸ್ಟಾರ್ ರಾಜ್ಯವನ್ನಾಗಿ ಅಭಿವೃದ್ಧಿಪಡಿಸಿದ್ದೇವೆ ಎಂಬ ಡಿಎಂಕೆ ಅಧ್ಯಕ್ಷರ ಹೇಳಿಕೆಯನ್ನು ತಳ್ಳಿಹಾಕಿದ ವಿಜಯ್, ಕೆ ಕಾಮರಾಜ್, ಸಿ ಎನ್ ಅಣ್ಣಾದೊರೈ ಮತ್ತು ಎಂ ಜಿ ರಾಮಚಂದ್ರನ್ ಅವರಂತಹ ದಿಗ್ಗಜ ನಾಯಕರ ಕಾಲದಲ್ಲಿ ರಾಜ್ಯವು ನಿಜವಾಗಿಯೂ "ಅದ್ಭುತ"ವಾಗಿತ್ತು ಎಂದರು.
Advertisement