

ಇಂದೋರ್: ಮಧ್ಯಪ್ರದೇಶದ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಕೈಲಾಶ್ ವಿಜಯ ವರ್ಗೀಯ ಮಾಧ್ಯಮಗಳ ಮುಂದೆಯೇ ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಲಕ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ. ಭಾಗೀರಥ್‌ಪುರ ಪ್ರದೇಶದಲ್ಲಿ ಕಲುಷಿತ ಕುಡಿಯುವ ನೀರಿನ ಘಟನೆಯ ಕುರಿತು ವರದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವಾಗ ತಾಳ್ಮೆ ಕಳೆದುಕೊಂಡ ಸಚಿವರು, ಕ್ಯಾಮರಾಗಳ ಮುಂದೆಯೇ ಆಕ್ಷೇಪಾರ್ಹ ಪದ ಬಳಸಿದ್ದಾರೆ.
ಭಾಗೀರಥಪುರ ವಿಜಯವರ್ಗಿಯ ಅವರ ಇಂದೋರ್-1 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಕಲುಷಿತ ನೀರು ಸೇವಿಸಿದ ಪರಿಣಾಮ ಅತಿಸಾರ ಮತ್ತು ವಾಂತಿಯಿಂದ ಇದುವರೆಗೂ ನಾಲ್ಕು ಮಂದಿ ಸಾವನ್ನಪ್ಪಿದ್ದು, 212 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ ಚೇತರಿಸಿಕೊಂಡ ನಂತರ ಐವತ್ತು ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ವರದಿಗಳು ಹೇಳುತ್ತವೆ.
ಘಟನೆಯಲ್ಲಿ ತಮ್ಮ ಸಂಬಂಧಿಕರನ್ನು ಕಳೆದುಕೊಂಡ ಹಾಗೂ ಅನಾರೋಗ್ಯಕ್ಕೆ ತುತ್ತಾಗಿರುವ ಕುಟುಂಬಗಳಿಗೆ ಪರಿಹಾರ ಒದಗಿಸುವಲ್ಲಿ ವಿಳಂಬವಾಗಿದೆ ಎಂದು ವರದಿಗಾರರೊಬ್ಬರು ಕೇಳಿದ್ದಾರೆ. ಇದಕ್ಕೆ ಕೋಪಗೋಡ ವಿಜಯ ವರ್ಗಿಯ, ರಿಪೋರ್ಟರ್ ಅಸಂಬಂಧ ಪ್ರಶ್ನೆ ಕೇಳಿದ್ದಾರೆ. ಇದು ಅನುಪಯುಕ್ತವಾಗಿದೆ. ' ತು ಕ್ಯಾ ಘಂಟಾ ಹೋಕೆ ಆಯಾ ಹೈ? ಎಂದು ಅವಹೇಳನಕಾರಿ ಭಾಷೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಸಚಿವರ ಪ್ರತಿಕ್ರಿಯೆಗೆ ವರದಿಗಾರ ಕೂಡಾ ಖಾತರವಾಗಿ ಪ್ರತಿಕ್ರಿಯಿಸಿದ್ದು, ಕೈಲಾಶ್ ಜಿ, ಬಾತ್ ಟೀಕ್ ಸೆ ಕಿಜಿಯೇ.. ಯೇ ಕ್ಯಾ ಶಬ್ದ್ ಹೋತಾ ಹೈ?( ಕೈಲಾಶ್ ಅವರೇ ಸರಿಯಾಗಿ ಮಾತನಾಡಿ, ಇದು ಯಾವ ರೀತಿಯ ಭಾಷೆ ಬಳಸುತ್ತಿದ್ದೀರಾ) ಎಂದು ಕೇಳಿದ್ದಾರೆ. ಸಚಿವರು ಹಾಗೂ ವರದಿಗಾರನ ನಡುವಿನ ಮಾತಿನ ಚಕಮಕಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರ ಹೇಳಿಕೆ ಜನಾಕ್ರೋಶಕ್ಕೆ ಕಾರಣವಾಗಿದೆ.
ಸಚಿವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಾಕಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಕಳೆದ ಎರಡು ದಿನಗಳಿಂದ ನಾನು ಮತ್ತು ನನ್ನ ತಂಡ ಕಲುಷಿತ ನೀರಿನಿಂದ ಉಂಟಾದ ಸಮಸ್ಯೆಯನ್ನು ಪರಿಹರಿಸಲು ಅವಿಶ್ರಾಂತವಾಗಿ ಶ್ರಮಿಸಿದ್ದೇವೆ. ನನ್ನ ಜನರು ಕಲುಷಿತ ನೀರಿನಿಂದ ಬಳಲುತ್ತಿದ್ದಾರೆ. ಕೆಲವರು ನಮ್ಮನ್ನು ಅಗಲಿದ್ದಾರೆ. ಈ ದು:ಖದ ಸ್ಥಿತಿಯಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸುಲ್ಲಿ ನಾನು ತಪ್ಪು ಮಾಡಿದ್ದೇನೆ. ಇದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.
ದುರಹಂಕಾರದಿಂದ ವರ್ತಿಸಿರುವ ವಿಜಯ್ ವರ್ಗಿಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಒತ್ತಾಯಿಸಿದೆ. 'ಇಂಧೋರ್‌ನಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟವರ ಸಂಖ್ಯೆ ಎಂಟರಿಂದ 10 ಕ್ಕೆ ಏರಿದೆ' ಎಂದು ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಿತು ಪಟ್ವಾರಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ದುರಹಂಕಾರದಿಂದ ವರ್ತಿಸುತ್ತಿರುವ ವಿಜಯ ವರ್ಗಿಯಾ ಅವರ ರಾಜೀನಾಮೆ ಪಡೆಯಬೇಕು ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ಒತ್ತಾಯಿಸಿದ್ದಾರೆ.
Advertisement