

ತಿರುವನಂತಪುರ: ಶಬರಿಮಲೆ ದೇಗುಲದಲ್ಲಿ ಹೆಚ್ಚಿನದಾಗಿ ದ್ವಾರಪಾಲಕರ ವಿಗ್ರಹಗಳ ಚಿನ್ನದ ಲೇಪನ ಕಳುವು ಆಗಿರುವುದಾಗಿ ಚಿನ್ನ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಗುರುವಾರ ಕೊಲ್ಲಂ ವಿಜಿಲೆನ್ಸ್ ನ್ಯಾಯಾಲಯಕ್ಕೆ ತಿಳಿಸಿದೆ.
ಗರ್ಭಗುಡಿಯ ಬಾಗಿಲಿನರುವ ದ್ವಾರಪಾಲಕರಾದ ಶಿವ ಮತ್ತು ವೈಯಾಲಿ ರೂಪದ ವಿಗ್ರಹಗಳಲ್ಲಿ ಚಿನ್ನ ನಾಪತ್ತೆಯಾಗಿದೆ ಎಂದು ಎಸ್‌ಐಟಿ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಬಹಿರಂಗಪಡಿಸಿದೆ.
ದೇವಸ್ಥಾನದಿಂದ ಕದ್ದ ಚಿನ್ನವನ್ನು ಇನ್ನೂ ಸಂಪೂರ್ಣವಾಗಿ ವಸೂಲಿ ಮಾಡಲು ತನಿಖಾ ತಂಡಕ್ಕೆ ಸಾಧ್ಯವಾಗಿಲ್ಲ ಎಂದು ಎಸ್‌ಐಟಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. 584 ಗ್ರಾಂ ಚಿನ್ನ ಮಾತ್ರ ಪತ್ತೆಯಾಗಿದ್ದು, ಇದು ಮೂಲತಃ ದೇವಸ್ಥಾನದಿಂದ ಕಳವು ಮಾಡಿದ್ದಕ್ಕಿಂತ ಕಡಿಮೆಯದ್ದಾಗಿದೆ ಎಂದು ತಂಡ ಮಾಹಿತಿ ನೀಡಿದೆ.
ಚೆನ್ನೈನಲ್ಲಿ ಸ್ಮಾರ್ಟ್ ಕ್ರಿಯೇಷನ್ ನಿಂದ 110 ಗ್ರಾಂ ಚಿನ್ನ ಹಾಗೂ ಬಳ್ಳಾರಿಯ ರೊದ್ದಂ ಜ್ಯುವೆಲ್ಲರಿಯಿಂದ 474 ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ ಎಂದು SIT ನ್ಯಾಯಾಲಯಕ್ಕೆ ತಿಳಿಸಿದೆ.
ಚಿನ್ನ ಹೊರತೆಗೆಯುವ ಮತ್ತು ಎಲೆಕ್ಟ್ರೋಪ್ಲೇಟಿಂಗ್ ಕೆಲಸಕ್ಕೆ ಶುಲ್ಕವಾಗಿ ಚೆನ್ನೈನ ಸ್ಮಾರ್ಟ್ ಕ್ರಿಯೇಷನ್ ಸಂಸ್ಥೆ ಚಿನ್ನ ತೆಗೆದುಕೊಂಡಿತ್ತು. ಉಳಿದ ಚಿನ್ನದ ಒಂದು ಭಾಗವನ್ನು ರೊದ್ದಂ ಜ್ಯುವೆಲ್ಲರಿಗೆ ಕಳುಹಿಸಲಾಗಿತ್ತು. ಅದು ಗೋವರ್ಧನ್ ಅವರ ಒಡೆತನದಲ್ಲಿದ್ದು, ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಎರಡು ಜ್ಯುವೆಲರಿಗಳಿಂದ ವಶಪಡಿಸಿಕೊಂಡ ಚಿನ್ನವನ್ನು ಪರೀಕ್ಷೆಗಾಗಿ ವಿಎಸ್‌ಎಸ್‌ಸಿಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಅವುಗಳನ್ನು ಚಿನ್ನದ ಲೇಪಿತ ಶೀಟ್ ಗಳಿಂದ ಹೊರತೆಗೆಯಲಾಗಿದೆಯೇ ಎಂದು ಖಚಿತಪಡಿಸಲು ಎಸ್‌ಐಟಿಗೆ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಕಳ್ಳಸಾಗಣೆಯಲ್ಲಿ ತೊಡಗಿರುವ ದರೋಡೆಕೋರರಿಗೆ ಚಿನ್ನವನ್ನು ಹಸ್ತಾಂತರಿಸಲಾಗಿದೆಯೇ ಎಂಬ ಬಗ್ಗೆ ಅನುಮಾನ ಹುಟ್ಟಿಕೊಳ್ಳಲಿದೆ ಎಂದು ಮಾಹಿತಿ ನೀಡಲಾಗಿದೆ.
Advertisement