

ಜೈಸಲ್ಮೇರ್: ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಗಡಿಯ ಮೂಲಕ ಭಾರತಕ್ಕೆ ನುಸುಳಿದ್ದ ಪಾಕಿಸ್ತಾನಿ ಪ್ರಜೆಯನ್ನು ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಗುರುವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಚ್ನಾ ಮತ್ತು ನೋಖ್ ಸೆಕ್ಟರ್‌ಗಳಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಈ ಒಳ ನುಸುಳುಕೋರನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಾಥಮಿಕ ವಿಚಾರಣೆಯಲ್ಲಿ ನುಸುಳುಕೋರ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ ಎಂದು ಶಂಕಿಸಲಾಗಿದೆ. ಆದಾಗ್ಯೂ ಜಂಟಿ ವಿಚಾರಣಾ ಕೇಂದ್ರ(ಜೆಐಸಿ) ವಿವರವಾದ ವೈದ್ಯಕೀಯ ಪರೀಕ್ಷೆ ಮತ್ತು ವಿಚಾರಣೆಯ ನಂತರ ಆತನ ನಿಖರವಾದ ಸ್ಥಿತಿ ಮತ್ತು ಹಿನ್ನೆಲೆಯನ್ನು ದೃಢೀಕರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ವಿಚಾರಣೆಯ ಸಮಯದಲ್ಲಿ, ಆ ವ್ಯಕ್ತಿ ತನ್ನನ್ನು ತಾನು ರಾಣಾ ಮೊಹಮ್ಮದ್ ಅಸ್ಲಾಂ ಅವರ ಪುತ್ರ ಮತ್ತು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಗೋಧಾ ಜಿಲ್ಲೆಯ ನಿವಾಸಿ ಇಶ್ರತ್(35) ಎಂದು ಹೇಳಿಕೊಂಡಿದ್ದಾನೆ.
ಆತನ ಬಳಿ ಪಾಕಿಸ್ತಾನಿ ಕರೆನ್ಸಿ ನೋಟುಗಳು, ಚಾಕು ಮತ್ತು ಇತರ ಕೆಲವು ವಸ್ತುಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ತನಿಖೆಗಾಗಿ ಬಿಎಸ್‌ಎಫ್ ಆತನನ್ನು ನೋಖ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದೆ.
Advertisement