

ಘಾಜಿಯಾಬಾದ್: ಮನೆ ಖಾಲಿ ಮಾಡುವಂತೆ ಹೇಳಿದ್ದಕ್ಕೆ ಮಾಜಿ ವಾಯುಪಡೆ ಅಧಿಕಾರಿಯನ್ನು ಸುಪಾರಿ ಕೊಟ್ಟು ಗುಂಡಿಕ್ಕಿ ಕೊಲ್ಲಿಸಿದ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದೆ.
ಹತ್ಯೆಯಾದವರನ್ನು ಬಾಗ್‌ಪತ್ ಜಿಲ್ಲೆ ಮೂಲದ ನಿವೃತ್ತ ಐಎಎಫ್ ಅಧಿಕಾರಿ ಯೋಗೇಶ್ ಎಂದು ಗುರುತಿಸಲಾಗಿದೆ. ಡಿಸೆಂಬರ್ 26 ರಂದು ಲೋನಿ ಪ್ರದೇಶದ ಅಶೋಕ್ ವಿಹಾರ್ ಕಾಲೋನಿಯಲ್ಲಿರುವ ನಿವಾಸಕ್ಕೆ ಹಿಂತಿರುಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.
ಯೋಗೇಶ್ ತನ್ನ ಪುತ್ರರಿಗೆ ಮನೆಯನ್ನು ಖಾಲಿ ಮಾಡುವಂತೆ ಸೂಚಿಸಿದ್ದರು. ಆಸ್ತಿಯ ದುರಾಸೆಯಿಂದ ಮಕ್ಕಳೇ ಕೊಲೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಯೋಗೇಶ್ ಕುಮಾರ್ ಅವರ ಪುತ್ರರು ತಂದೆಯ ಕೊಲೆಗೆ ಸುಪಾರಿ ನೀಡಿದರು ಎಂದು ಹೇಳಲಾಗಿದೆ.
ಯೋಗೇಶ್ ಕುಮಾರ್ ಮನೆಗೆ ಬರುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಮೇಲೆ ಎರಡು ಗುಂಡು ಹಾರಿಸಿ, ಕಬ್ಬಿಣದ ಪೈಪ್‌ನಿಂದ ಹಲ್ಲೆ ನಡೆಸಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ಅವರ ಮಕ್ಕಳೇ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 103(1) ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಿದ್ದಾರೆ ಎಂದು ಲೋಣಿಯ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಸಿದ್ಧಾರ್ಥ ಗೌತಮ್ ತಿಳಿಸಿದ್ದಾರೆ.
ಅರವಿಂದ್‌ನ ಸೋದರ ಮಾವ ನವೀನ್ ಎಂಬಾತ ಸಹ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಈತ ಕೌಶಂಬಿ ಜಿಲ್ಲೆಯಲ್ಲಿ ಕಾನ್‌ಸ್ಟೆಬಲ್ ಆಗಿ ನಿಯೋಜನೆಗೊಂಡಿದ್ದ ಎಂದು ವಿಚಾರಣೆಯ ಸಮಯದಲ್ಲಿ ತಿಳಿದುಬಂದಿದೆ. ಅರವಿಂದ್, ಯೋಗೇಶ್ ಮೇಲೆ ಗುಂಡು ಹಾರಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.
ಅರವಿಂದ್‌ನನ್ನು ಬಂಧಿಸಿ ಗಾಜಿಯಾಬಾದ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement