

ಚೆನ್ನೈ: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್ ನ 3ನೇ ಆವೃತ್ತಿಯ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್(RNGSS) ಪ್ರಶಸ್ತಿಯನ್ನು ಜೀವಮಾನ ಸಾಧನೆಗಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಖ್ಯಾತ ಸಾಹಿತಿ, ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ ಡಾ. ಚಂದ್ರಶೇಖರ ಕಂಬಾರ ಅವರಿಗೆ ಗುರುವಾರ ಚೆನ್ನೈನಲ್ಲಿ ಪ್ರದಾನ ಮಾಡಲಾಯಿತು.
ಇಂದು ಚೆನ್ನೈನಲ್ಲಿ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ತಮಿಳುನಾಡು ಸಚಿವರಾದ ಪಳನಿವೇಲ್ ತಿಯಾಗ ರಾಜನ್, ಮಾ. ಸುಬ್ರಮಣಿಯನ್, ಟಿಎನ್‌ಐಇ ಗ್ರೂಪ್ ಸಿಎಂಡಿ ಮನೋಜ್ ಕುಮಾರ್ ಸೊಂಥಾಲಿಯಾ, ಸಿಇಒ ಲಕ್ಷ್ಮಿ ಮೆನನ್, ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ, ಸಂಪಾದಕ ಸಾಂತ್ವಾನ ಭಟ್ಟಾಚಾರ್ಯ ಮತ್ತು ದಿನಮಣಿ ಸಂಪಾದಕ ಕೆ. ವೈದ್ಯನಾಥನ್ ಅವರು ಡಾ. ಚಂದ್ರಶೇಖರ ಕಂಬಾರ ಅವರಿಗೆ 'ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದರು.
ಡಾ. ಚಂದ್ರಶೇಖರ ಕಂಬಾರ ಅವರ ಬರಹಗಳು ಮತ್ತು ನಾಟಕಗಳು ಶಾಸ್ತ್ರೀಯ, ಸಮಕಾಲೀನ, ಸ್ಥಳೀಯ ಮತ್ತು ಸಾರ್ವತ್ರಿಕವಾದವುಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ.
RNGSS 'ಅತ್ಯುತ್ತಮ ನಾನ್-ಫಿಕ್ಷನ್' ಪ್ರಶಸ್ತಿಯನ್ನು ಸುದೀಪ್ ಚಕ್ರವರ್ತಿ ಅವರ ಫಾಲನ್ ಸಿಟಿ: ಎ ಡಬಲ್ ಮರ್ಡರ್, ಪೊಲಿಟಿಕಲ್ ಇನ್‌ಸ್ಯಾನಿಟಿ ಮತ್ತು ಡೆಲ್ಲಿಸ್ ಡಿಸೆಂಟ್ ಫ್ರಮ್ ಗ್ರೇಸ್‌ಗಾಗಿ ನೀಡಲಾಗಿದೆ.
ಸಂಪ್ರದಾಯಗಳಲ್ಲಿ ಬೇರೂರಿರುವ ಮತ್ತು ಸಮಕಾಲೀನ ಸಾಹಿತ್ಯ ಸಂವೇದನೆಯಿಂದ ರೂಪುಗೊಂಡ, ಸುಬಿ ತಬಾ ಅವರ ಟೇಲ್ಸ್ ಫ್ರಮ್ ದಿ ಡಾನ್-ಲಿಟ್ ಮೌಂಟೇನ್ಸ್: ಸ್ಟೋರೀಸ್ ಫ್ರಮ್ ಅರುಣಾಚಲ ಪ್ರದೇಶಕ್ಕೆ RNGSS 'ಅತ್ಯುತ್ತಮ ಕಾದಂಬರಿ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇನ್ನು RNGSS 'ಅತ್ಯುತ್ತಮ ಚೊಚ್ಚಲ' ಪ್ರಶಸ್ತಿಯನ್ನು ನೇಹಾ ದೀಕ್ಷಿತ್ ಅವರಿಗೆ 'ದಿ ಮೆನಿ ಲೈವ್ಸ್ ಆಫ್ ಸೈದಾ ಎಕ್ಸ್: ದಿ ಸ್ಟೋರಿ ಆಫ್ ಆನ್ ಅನ್‌ನೋನ್ ಇಂಡಿಯನ್' ಗೆ ನೀಡಲಾಗಿದೆ.
ಭಾರತೀಯ ಪತ್ರಿಕೋದ್ಯಮದ ದಿಗ್ಗಜ ರಾಮನಾಥ್ ಗೋಯೆಂಕಾ ಅವರ ಸ್ಮರಣಾರ್ಥವಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್(TNIE) ಗ್ರೂಪ್, ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್(RNGSS) ಪ್ರಶಸ್ತಿಯನ್ನು ನೀಡುತ್ತಿದೆ.
'ಜೀವಮಾನ ಸಾಧನೆ ಪ್ರಶಸ್ತಿ ಎರಡು ಲಕ್ಷ ರೂಪಾಯಿ ಬಹುಮಾನ, ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ಒಳಗೊಂಡಿದ್ದು, ಬೆಸ್ಟ್ ಫಿಕ್ಷನ್, ಬೆಸ್ಟ್ ನಾನ್-ಫಿಕ್ಷನ್ ಮತ್ತು ಬೆಸ್ಟ್ ಡೆಬ್ಯೂಟ್ ಪ್ರಶಸ್ತಿ ತಲಾ ಒಂದು ಲಕ್ಷ ರೂಪಾಯಿ ಬಹುಮಾನ,ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ಒಳಗೊಂಡಿದೆ.
Advertisement