ಛತ್ತೀಸ್‌ಗಢ: ವರ್ಷದ ಆರಂಭದಲ್ಲೇ ಭರ್ಜರಿ ಭೇಟೆ: 'ಎನ್‌ಕೌಂಟರ್' ನಲ್ಲಿ 14 ನಕ್ಸಲೀಯರ ಹತ್ಯೆ!
ಬಿಜಾಪುರ: ದಕ್ಷಿಣ ಛತ್ತೀಸ್‌ಗಢದ ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಇಂದು ಮುಂಜಾನೆ ಭದ್ರತಾ ಪಡೆಗಳು ನಡೆಸಿದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 14 ಸಶಸ್ತ್ರ ನಕ್ಸಲೀಯರನ್ನು ಹೊಡೆದುರುಳಿಸಲಾಗಿದೆ. ಇದು ವರ್ಷದ ಮೊದಲ ಮಹತ್ವದ ನಕ್ಸಲ್ ವಿರೋಧಿ ಕಾರ್ಯಾಚರಣೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಯಪುರದಿಂದ ದಕ್ಷಿಣಕ್ಕೆ 450 ಕಿ. ಮೀ. ದೂರದಲ್ಲಿರುವ ಬಿಜಾಪುರದ ಬಸಗುಡ-ಟಾರೆಮ್ ಅರಣ್ಯ ಪ್ರದೇಶ ಮತ್ತು ಸುಕ್ಮಾದ ಕೊಂಟಾ-ಕಿಸ್ತಾರಾಮ್ ಅರಣ್ಯದಲ್ಲಿ ನಕ್ಸಲೀಯರು ಇರುವ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿಯ ದೊರೆತ ನಂತರ ಜಿಲ್ಲಾ ಮೀಸಲು ಪೊಲೀಸ್ ಪಡೆಯ ತಂಡಗಳು ಇಂದು ಬೆಳಗ್ಗೆ ಆಯಾ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದಾಗ ಗುಂಡಿನ ಚಕಮಕಿ ನಡೆದಿದೆ.
"ಇದುವರೆಗೆ ಸುಕ್ಮಾ ಎನ್‌ಕೌಂಟರ್ ನಡೆದ ಸ್ಥಳದಿಂದ 12 ಮತ್ತು ಬಿಜಾಪುರದಿಂದ ಇಬ್ಬರು ನಕ್ಸಲೀಯರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಸ್ತಾರ್ ಪೊಲೀಸ್ ಮಹಾನಿರ್ದೇಶಕ ಸುಂದರರಾಜ್ ಪಟ್ಟಿಲಿಂಗಂ ತಿಳಿಸಿದ್ದಾರೆ. ಎನ್‌ಕೌಂಟರ್ ಸ್ಥಳಗಳಿಂದ AK-47, INSAS ಅಸಾಲ್ಟ್ ರೈಫಲ್, ಸ್ವಯಂ-ಲೋಡಿಂಗ್ ರೈಫಲ್ ಮತ್ತಿತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಎರಡೂ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಇನ್ನೂ ಶೋಧ ಕಾರ್ಯಗಳು ನಡೆಯುತ್ತಿವೆ. ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿಯ ಸುರಕ್ಷತೆಯ ಕಾರಣದಿಂದ ಹೆಚ್ಚಿನ ಕಾರ್ಯಾಚರಣೆಯ ವಿವರಗಳನ್ನು ಹಂಚಿಕೊಳ್ಳಲಾಗಿಲ್ಲ.
ಗುಂಡಿನ ಕಾಳಗದಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಗಾಯಗೊಂಡಿರುವ ಬಗ್ಗೆ ಯಾವುದೇ ವರದಿ ಬಂದಿಲ್ಲ ಮತ್ತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಸುಕ್ಮಾ ಮತ್ತು ಬಿಜಾಪುರ ಬಸ್ತಾರ್ ವಿಭಾಗದಲ್ಲಿ ಹೆಚ್ಚು ನಕ್ಸಲ್ ಪೀಡಿತ ಜಿಲ್ಲೆಗಳಾಗಿವೆ. 2025ರಲ್ಲಿ ಛತ್ತೀಸ್ ಗಢದಲ್ಲಿ 256 ನಕ್ಸಲೀಯರನ್ನು ಹತ್ಯೆ ಮಾಡಲಾಗಿತ್ತು. ಸುಮಾರು 1,650 ಮಂದಿ ಮುಖ್ಯವಾಹಿನಿಗೆ ಸೇರಲು ಶರಣಾಗಿದ್ದಾರೆ.
ಮಾರ್ಚ್ 31, 2026 ರೊಳಗೆ ಭಾರತವು ಮಾವೋವಾದಿ ಹಿಂಸಾಚಾರದಿಂದ ಮುಕ್ತವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಹಿಂದೆ ಘೋಷಿಸಿದ್ದರು.

