

ಕೊಚ್ಚಿ: ಕೊಚ್ಚಿಯ ಖಾಸಗಿ ಆಸ್ಪತ್ರೆಯೊಂದರ ಆವರಣದಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿ ತಾನು ಬಂದಿದ್ದ ಕಾರಿನೊಳಗೆ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.
ಅನಿತಾ ಎಂಬ ಮಹಿಳೆ ತನ್ನ ಪತಿ ವಿಜಯ್ ಮತ್ತು ಪೋಷಕರೊಂದಿಗೆ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಕಣ್ಣೂರಿನಿಂದ ಅರೂರ್‌ಗೆ ಪ್ರಯಾಣಿಸಿದ್ದರು. ಜನವರಿ 22 ಕ್ಕೆ ಡಾಕ್ಟರ್ ಹೆರಿಗೆಗೆ ದಿನ ಕೊಟ್ಟಿದ್ದರು. ಆದರೆ ಇಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಆಗ ಅವರನ್ನು ಆರಂಭದಲ್ಲಿ ಹತ್ತಿರದ ಅರೂರ್‌ನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಹೊಟ್ಟೆನೋವು ಕಡಿಮೆ ಮಾಡಲು ಮಾತ್ರೆ ಕೊಟ್ಟು ಕಳುಹಿಸಿದರು.
ಆದರೆ ನೋವು ನಿಲ್ಲಲಿಲ್ಲ. ಬೆಳಗ್ಗೆ 8 ಗಂಟೆಯ ಸುಮಾರಿಗೆ ನೋವು ತೀವ್ರಗೊಂಡಂತೆ, ಕುಟುಂಬದವರು ಕೊಚ್ಚಿಯ ವಿಪಿಎಸ್ ಲೇಕ್‌ಶೋರ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಗರ್ಭಿಣಿಯ ಆಗಮನದ ಬಗ್ಗೆ ಆಸ್ಪತ್ರೆ ಅಧಿಕಾರಿಗಳಿಗೆ ತಿಳಿಸಿದಾಗ, ತುರ್ತು ವೈದ್ಯ ಡಾ. ಆದಿಲ್ ಅಶ್ರಫ್ ತುರ್ತು ವಿಭಾಗಕ್ಕೆ ಧಾವಿಸಿದರು.
ಕಾರಿನೊಳಗೆ ಇದ್ದ ಅನಿತಾರನ್ನು ಪರೀಕ್ಷಿಸಿದ ವೈದ್ಯರು ಮಗು ಈಗಾಗಲೇ ಅರ್ಧ ಹೊರಗೆ ಬಂದಿದೆ ಎಂದು ಇನ್ನು ಸಮಯವಿಲ್ಲ, ಹೆಚ್ಚಿನ ಸಮಸ್ಯೆಯೇನೂ ಇಲ್ಲ ಎಂದು ವೈದ್ಯಕೀಯ ತಂಡವು ಕಾರಿನಲ್ಲಿಯೇ ಹೆರಿಗೆ ಮಾಡಲು ನಿರ್ಧರಿಸಿತು.
ರೋಗಿ ತುರ್ತು ಪ್ರವೇಶದ್ವಾರವನ್ನು ತಲುಪುವ ಹೊತ್ತಿಗೆ, ಮಗು ಈಗಾಗಲೇ ಹೊರಬರುತ್ತಿತ್ತು. ಆಸ್ಪತ್ರೆಯೊಳಗೆ ವಾರ್ಡ್ ಗೆ ಸ್ಥಳಾಂತರಿಸಲು ಸಮಯವಾಗಿ ತೊಂದರೆಯಾಗಬಹುದು ಎಂದು ತಕ್ಷಣವೇ ಸ್ಥಳದಲ್ಲೇ ಹೆರಿಗೆ ಮಾಡಿಸಿದೆವು ಎಂದು ಡಾ. ಆದಿಲ್ ಅಶ್ರಫ್ ಹೇಳಿದರು.
ಹೆರಿಗೆಯ ನಂತರ, ತಾಯಿಯನ್ನು ಪ್ರಸವಪೂರ್ವ ಆರೈಕೆಗಾಗಿ ಹೆರಿಗೆ ಕೋಣೆಗೆ ಸ್ಥಳಾಂತರಿಸಲಾಯಿತು. ಆದರೆ ನವಜಾತ ಶಿಶುವನ್ನು ಮಾತ್ರ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು. ತಾಯಿ ಮತ್ತು ಮಗು ಇಬ್ಬರೂ ಚೆನ್ನಾಗಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಪತ್ರೆ ತಂಡದ ಸಕಾಲಿಕ ಹಸ್ತಕ್ಷೇಪವು ತಾಯಿ ಮತ್ತು ನವಜಾತ ಶಿಶುವಿನ ಜೀವಗಳನ್ನು ಉಳಿಸಿದೆ ಎಂದು ಅನಿತಾ ಅವರ ಪತಿ ಹೇಳಿದರು. ಪರಿಸ್ಥಿತಿ ಅತ್ಯಂತ ಗಂಭೀರವಾಗಿತ್ತು. ವೈದ್ಯರು ಮತ್ತು ಸಿಬ್ಬಂದಿ ತಕ್ಷಣ ಕಾರ್ಯನಿರ್ವಹಿಸಿ ನನ್ನ ಹೆಂಡತಿ ಮತ್ತು ಮಗು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಂಡರು. ನಾವು ಇಡೀ ತಂಡಕ್ಕೆ ಕೃತಜ್ಞರಾಗಿರುತ್ತೇವೆ ಎಂದರು.
Advertisement