

ನವದೆಹಲಿ: 2020 ರ ದೆಹಲಿ ಗಲಭೆ ಪ್ರಕರಣದಲ್ಲಿ ಜೆಎನ್‌ಯು ಮಾಜಿ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್ ಆದೇಶವು ಕಾಂಗ್ರೆಸ್ ಪಕ್ಷದ ಮುಖದ ಮೇಲೆ "ಹೊಡೆದಂತಿದೆ" ಎಂದು ಬಿಜೆಪಿ ಸೋಮವಾರ ಹೇಳಿದೆ ಮತ್ತು "ತುಕ್ಡೆ-ತುಕ್ಡೆ ಗ್ಯಾಂಗ್" ಅನ್ನು ಬೆಂಬಲಿಸಿದ್ದಕ್ಕಾಗಿ ಕಾಂಗ್ರೆಸ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ.
ಖಾಲಿದ್ ಮತ್ತು ಇಮಾಮ್ ಅವರನ್ನು ಭಾರತದಲ್ಲಿನ ವಿಭಜಕ ಶಕ್ತಿಗಳ "ಪೋಸ್ಟರ್ ಬಾಯ್ಸ್" ಎಂದು ಕರೆದ ಬಿಜೆಪಿ, ಕಾಂಗ್ರೆಸ್ ಅವರನ್ನು ರಕ್ಷಿಸಲು "ಮುಗ್ಧ ಬಲಿಪಶುಗಳು" ಎಂದು ಬಿಂಬಿಸುತ್ತಿದೆ ಎಂದು ಆರೋಪಿಸಿದೆ.
2020 ರ ದೆಹಲಿ ಗಲಭೆ ಪಿತೂರಿ ಪ್ರಕರಣದಲ್ಲಿ ಖಾಲಿದ್ ಮತ್ತು ಇಮಾಮ್ ಅವರಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಆದಾಗ್ಯೂ, ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್ ವಿ ಅಂಜಾರಿಯಾ ಅವರ ಪೀಠವು ಈ ಪ್ರಕರಣದಲ್ಲಿ ಇತರ ಆರೋಪಿಗಳಾದ ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಶಿಫಾ ಉರ್ ರೆಹಮಾನ್, ಮೊಹಮ್ಮದ್ ಸಲೀಮ್ ಖಾನ್ ಮತ್ತು ಶಾದಾಬ್ ಅಹ್ಮದ್ ಅವರಿಗೆ ಜಾಮೀನು ನೀಡಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ, "ಸತ್ಯಮೇವ ಜಯತೇ(ಸತ್ಯ ಮಾತ್ರ ಗೆಲ್ಲುತ್ತದೆ)" ಎಂದು X ನಲ್ಲಿ ಬರೆದಿದ್ದಾರೆ.
ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್‌ಗೆ ಜಾಮೀನು "ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಮೇಲ್ನೋಟಕ್ಕೆ ಆರೋಪ ನಿಜ" ಎಂದು ಕೋರ್ಟ್ ಹೇಳಿದೆ. "ಅಫ್ಜಲ್‌ನಿಂದ ಉಮರ್ ಮತ್ತು ಶಾರ್ಜೀಲ್‌ವರೆಗಿನ ತುಕ್ಡೆ-ತುಕ್ಡೆ ಗ್ಯಾಂಗ್‌ಗೆ ಬೆಂಬಲ ನೀಡಿದ್ದಕ್ಕಾಗಿ ಕಾಂಗ್ರೆಸ್ ಕ್ಷಮೆಯಾಚಿಸಬೇಕು" ಎಂದು ಪೂನವಾಲಾ ಆಗ್ರಹಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಅವರು, ಸುಪ್ರೀಂ ಕೋರ್ಟ್ ಆದೇಶವು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಮುಖದ ಮೇಲೆ "ಹೊಡೆದಂತಿದೆ". ಅವರು "ತುಕ್ಡೆ-ತುಕ್ಡೆ ಪೋಸ್ಟರ್ ಹುಡುಗರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರನ್ನು ಮುಗ್ಧ ಬಲಿಪಶುಗಳು" ಎಂದು ಬಿಂಬಿಸಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.
Advertisement