

ಮುಂಬೈ: ಮಂಗಳವಾರ ನಡೆಯಬೇಕಿದ್ದ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್(ಎಂಸಿಎ)ನ ಸುಪ್ರೀಂ ಕೌನ್ಸಿಲ್ ಚುನಾವಣೆಗೆ ಬಾಂಬೆ ಹೈಕೋರ್ಟ್ ತಡೆ ನೀಡಿದೆ.
MCA ಹಾಲಿ ಅಧ್ಯಕ್ಷ ಮತ್ತು ಎನ್‌ಸಿಪಿ(ಎಸ್‌ಪಿ) ಶಾಸಕ ರೋಹಿತ್ ಪವಾರ್ ಅವರ ಸಂಬಂಧಿಕರು ಸೇರಿದಂತೆ 400 ಹೊಸ ಸದಸ್ಯರನ್ನು ಸೇರಿಸಿದ ರೀತಿಯನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು.
ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅಂಕಡ್ ಅವರ ಪೀಠ, ಹೊಸ ಸದಸ್ಯರ ಪ್ರವೇಶದ ಸಂಪೂರ್ಣ ಪ್ರಕ್ರಿಯೆಯು ಕಾನೂನು ಬಾಹಿರವಾಗಿದ್ದು, ಎಲ್ಲವನ್ನೂ ತರಾತುರಿಯಲ್ಲಿ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಹೇಳಿದೆ.
ಚುನಾವಣೆಗಾಗಿ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ನಿಯಮಗಳನ್ನು ಉಲ್ಲಂಘಿಸಲಾಗಿದೆ ಮತ್ತು ಡಿಸೆಂಬರ್ 25, 2025 ರಂದು ಬಿಡುಗಡೆಯಾದ ಮತದಾರರ ಪಟ್ಟಿಗೆ ಸದಸ್ಯರನ್ನು ಸೇರಿಸುವಲ್ಲಿ ಪಕ್ಷಪಾತವಿದೆ ಎಂದು ಆರೋಪಿಸಿ ಹಲವಾರು ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್, ಚುನಾವಣೆಗೆ ತಡೆ ನೀಡಿ ಆದೇಶಿಸಿದೆ.
ಹೊಸ ಸದಸ್ಯರಲ್ಲಿ ರೋಹಿತ್ ಪವಾರ್ ಅವರ ಪತ್ನಿ ಕುಂತಿ ಮತ್ತು ಅವರ ಮಾವ ಸತೀಶ್ ಮಗರ್ ಮತ್ತು ಎನ್‌ಸಿಪಿ(ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ ಅವರ ಮಗಳು ರೇವತಿ ಸೇರಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಹೊಸ ಸದಸ್ಯರಲ್ಲಿ ಅನೇಕರಿಗೆ ಕ್ರಿಕೆಟ್‌ನೊಂದಿಗೆ ಯಾವುದೇ ಸಂಬಂಧವಿಲ್ಲ ಮತ್ತು ಕೆಲವರು MCA ಅನ್ನು ತಮ್ಮ ಖಾಸಗಿ ಸಂಸ್ಥೆಯಾಗಿ ಮಾಡಿಕೊಳ್ಳಲು ಮಾತ್ರ ಅವರನ್ನು ಸದಸ್ಯರನ್ನಾಗಿ ಸೇರಿಸಿಕೊಳ್ಳಲಾಗಿದೆ ಎಂದು ಮಾಜಿ ಕ್ರಿಕೆಟಿಗ ಕೇದಾರ್ ಜಾಧವ್ ಸೇರಿದಂತೆ ಹಲವು ಅರ್ಜಿದಾರರು ಆರೋಪಿಸಿದ್ದಾರೆ.
Advertisement