

ನವದೆಹಲಿ: ನಾಯಿ ಸಿಟ್ಟಿನಲ್ಲಿದ್ದಾಗ ಹೇಗೆ ವರ್ತಿಸುತ್ತದೆ, ಯಾವ ನಾಯಿಯ ಮನಸ್ಥಿತಿ ಹೇಗಿರುತ್ತದೆ ಎಂಬುದು ಯಾರಿಗೆ ಗೊತ್ತಿರುತ್ತದೆ. ಅದರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಹಾಗಾಗಿ, ರಸ್ತೆಗಳಲ್ಲಿ ನಾಯಿಗಳಿಲ್ಲದಂತೆ ನೋಡಿಕೊಳ್ಳುವ ಕ್ರಮಗಳಾಗಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ಸುಮೊಟೊ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ವಿಕ್ರಮ್ ನಾಥ್, ನ್ಯಾ. ಸಂದೀಪ್ ಮೆಹ್ತಾ ಹಾಗೂ ನ್ಯಾ. ಎನ್.ವಿ. ಅಂಜರಾರಿಯಾ ಅವರಿದ್ದ ಪೀಠ ಮೇಲಿನಂತೆ ಹೇಳಿದೆ.
ನಾಯಿಗಳು ಕಚ್ಚುತ್ತವೆ ಎಂಬುದಷ್ಟೇ ವಿಚಾರವಲ್ಲ. ದ್ವಿಚಕ್ರ ವಾಹನಗಳಲ್ಲಿ ಚಲಿಸುವವರನ್ನು ನಾಯಿಗಳು ಕಚ್ಚಬಹುದು ಅಥವಾ ಅಟ್ಟಾಡಿಸಿಕೊಂಡು ಹೋಗಬಹುದು. ಸವಾರರು ಕೆಳಗೆ ಬಿದ್ದು ಅಪಘಾತಕ್ಕೀಡಾಗುವ ಅಪಾಯವಿದೆ. ಸಮಸ್ಯೆ ಆಗುವ ಮೊದಲೇ ಎಚ್ಚರಿಕೆ ವಹಿಸುವುದು ಉತ್ತಮ. ರಸ್ತೆಗಳು ನಾಯಿಗಳಿಲ್ಲದೆ ಮುಕ್ತವಾಗಿರಬೇಕು, ರಸ್ತೆಗಳಲ್ಲಿ ಓಡಾಡುವ ನಾಯಿಗಳು, ಆ ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ ಅದರಲ್ಲೂ ದ್ವಿಚಕ್ರ ವಾಹನಗಳು ಮತ್ತು ಸೈಕಲ್ ಸವಾರರಿಗೆ ಅಪಾಯಕಾರಿ ಎಂದು ಪೀಠ ತಿಳಿಸಿದೆ.
ನಾಯಿಗಳು ಕಾಂಪೌಂಡ್‌ಗಳ ಬಳಿ ಹಾಗೂ ವಿಶ್ವವಿದ್ಯಾಲಯಗಳ ಆವರಣದಲ್ಲಿಯೂ ವಾಸಿಸುತ್ತವೆ. ನಾನು ವಿಶ್ವವಿದ್ಯಾಲಯದಲ್ಲಿದ್ದಾಗ, ಅಲ್ಲಿಯೂ ನಾಯಿಗಳಿದ್ದವು. ಆದರೆ, ಅವು ಯಾರನ್ನೂ ಕಚ್ಚಿಲ್ಲ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಆವರಣದಲ್ಲಿ ಸಾಕಷ್ಟು ನಾಯಿಗಳಿವೆ' ಎಂದು ಪ್ರಾಣಿಗಳ ಹಕ್ಕು ಪ್ರತಿಪಾದಿಸುವ ಗುಂಪುಗಳ ಪರ ಹಾಜರಿದ್ದ ಕಪಿಲ್ ಸಿಬಲ್ ಹೇಳಿದರು.
ನಾಯಿ ಕಡಿತವನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಿ ಹೇಳಿರುವ ಪೀಠ, 'ನಾಯಿಗಳಿಗೆ ಗುಂಡಿಕ್ಕಿ ಎಂದು ಯಾರೂ ಹೇಳುತ್ತಿಲ್ಲ. ರಸ್ತೆಗಳು ನಾಯಿಗಳಿಂದ ಮುಕ್ತವಾಗಿರಬೇಕು' ಎಂದು ಪುನರುಚ್ಚರಿಸಿದೆ.
ನಾಯಿಗಳನ್ನು ರಸ್ತೆಗಳಿಂದ ತೆರವು ಮಾಡುವ ಹೊಣೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಜ್ಯ ಸರ್ಕಾರಗಳಿಗೆ ವರ್ಗಾಯಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಪೀಠ, ಕಳೆದ 20 ದಿನಗಳಲ್ಲಿ ಬೀದಿ ನಾಯಿಗಳ ಕಾರಣದಿಂದಾಗಿ ಇಬ್ಬರು ನ್ಯಾಯಾಧೀಶರು ಅಪಘಾತಕ್ಕೀಡಾಗಿದ್ದಾರೆ. ಇದು ಗಂಭೀರ ವಿಷಯ ಎಂದು ಚಾಟಿ ಬೀಸಿದೆ.
Advertisement