

ಮುಂಬೈ: ರಾಜಕೀಯದಲ್ಲಿ ಯಾರು ಶಾಶ್ವತವಾಗಿ ಶತ್ರುಗಳಲ್ಲ ಯಾರು ಶಾಶ್ವತವಾಗಿ ಮಿತ್ರರಲ್ಲ ಎಂಬ ಮಾತು ಅಕ್ಷರಶಃ ನಿಜವಾಗಿದ್ದು, ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಂಬರ್ನಾಥ್ ಪುರಸಭೆಯಲ್ಲಿ ಬದ್ಧವೈರಿಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಚುನಾವಣೋತ್ತರ ಮೈತ್ರಿ ಮಾಡಿಕೊಂಡಿವೆ. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಬುಧವಾರ ತನ್ನ 12 ಹೊಸ ಕೌನ್ಸಿಲರ್‌ಗಳನ್ನು ಪಕ್ಷದಿಂದ ಅಮಾನತುಗೊಳಿಸಿದೆ.
ಈ ಮೈತ್ರಿ "ಸಂಪೂರ್ಣವಾಗಿ ತಪ್ಪು ಕ್ರಮ" ಎಂದು ಕರೆದ ಮಹಾರಾಷ್ಟ್ರ ಕಾಂಗ್ರೆಸ್, ಅಂಬರ್ನಾಥ್ ಬ್ಲಾಕ್ ಸಮಿತಿಯನ್ನು ವಿಸರ್ಜಿಸಿ ಅದರ ಅಧ್ಯಕ್ಷ ಮತ್ತು ಪಕ್ಷದ ಹಿರಿಯ ನಾಯಕ ಪ್ರದೀಪ್ ಪಾಟೀಲ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದೆ.
ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಗಣೇಶ್ ಪಾಟೀಲ್ ಅವರು, ಈ ಸಂಬಂಧ ಪ್ರದೀಪ್ ಅವರಿಗೆ ಪತ್ರ ಬರೆದಿದ್ದು, "ಇದು ಸಂಪೂರ್ಣವಾಗಿ ತಪ್ಪು ಕ್ರಮ ಮತ್ತು ಪಕ್ಷದ ಶಿಸ್ತಿನ ಉಲ್ಲಂಘನೆಯಾಗಿದೆ. ಈ ವಿಷಯವನ್ನು ಪರಿಗಣಿಸಿ, ಗೌರವಾನ್ವಿತ ರಾಜ್ಯ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಅವರ ಆದೇಶದ ಮೇರೆಗೆ, ನಿಮ್ಮನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಇದಲ್ಲದೆ, ನಿಮ್ಮ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಲಾಗುತ್ತಿದೆ. ಅದೇ ರೀತಿ, ನಿಮ್ಮೊಂದಿಗೆ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಎಲ್ಲಾ ಕಾರ್ಪೊರೇಟರ್‌ಗಳನ್ನು ಸಹ ಪಕ್ಷದಿಂದ ಅಮಾನತುಗೊಳಿಸಲಾಗುತ್ತಿದೆ" ಎಂದು ಹೇಳಿದ್ದಾರೆ.
ಕಳೆದ ತಿಂಗಳು ನಡೆದ ನಗರ ಪಾಲಿಕೆ ಚುನಾವಣೆಯ ನಂತರ, ಬಿಜೆಪಿ, ಕಾಂಗ್ರೆಸ್ ಮತ್ತು ಅಜಿತ್ ಪವಾರ್ ನೇತೃತ್ವದ (ಎನ್‌ಸಿಪಿ)ಯೊಂದಿಗೆ ಕೈಜೋಡಿಸಿ ಅಂಬರ್ನಾಥ್ ಪುರಸಭೆಯಲ್ಲಿ ಸರ್ಕಾರ ರಚಿಸಿವೆ.
27 ಕೌನ್ಸಿಲರ್‌ಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಮಿತ್ರಪಕ್ಷ ಮತ್ತು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯನ್ನು ಬದಿಗಿಡುವ ಉದ್ದೇಶದಿಂದ ಬದ್ಧವೈರಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಲಾಗಿದೆ.
14 ಸ್ಥಾನಗಳನ್ನು ಗೆದ್ದ ಬಿಜೆಪಿ, 12 ಸ್ಥಾನಗಳನ್ನು ಗೆದ್ದ ಬದ್ಧವೈರಿ ಕಾಂಗ್ರೆಸ್ ಹಾಗೂ 4 ಸ್ಥಾನಗಳನ್ನು ಪಡೆದ ಎನ್ ಸಿಪಿ ಜೊತೆ ಮೈತ್ರಿ ಮಾಡಿಕೊಂಡಿದೆ.
ಒಬ್ಬ ಪಕ್ಷೇತರ ಸದಸ್ಯನ ಬೆಂಬಲದೊಂದಿಗೆ, ಮೂರು ಪಕ್ಷಗಳ ಒಕ್ಕೂಟದ ಸದಸ್ಯರ ಸಂಖ್ಯೆ 32 ಕ್ಕೆ ಏರಿದ್ದು, ಬಹುಮತಕ್ಕೆ 30 ಸದಸ್ಯರ ಅಗತ್ಯ ಇದೆ.
ಆದಾಗ್ಯೂ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಈ ಮೈತ್ರಿಯನ್ನು ತೀವ್ರವಾಗಿ ವಿರೋಧಿಸಿದ್ದು, ಪಕ್ಷದ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಈ ಮೈತ್ರಿಕೂಟವನ್ನು "ಒಪ್ಪಿಕೊಳ್ಳಲು ಸಾಧ್ಯವಿಲ್ಲ" ಎಂದಿರುವ ಸಿಎಂ ಫಡ್ನವೀಸ್, ಅಂತಹ ವ್ಯವಸ್ಥೆಗಳನ್ನು ಪಕ್ಷದ ಹಿರಿಯ ನಾಯಕತ್ವವು ಅನುಮೋದಿಸಿಲ್ಲ ಮತ್ತು ಸಾಂಸ್ಥಿಕ ಶಿಸ್ತನ್ನು ಉಲ್ಲಂಘಿಸಿದೆ ಎಂದು ಹೇಳಿದ್ದಾರೆ.
"ಕಾಂಗ್ರೆಸ್ ಅಥವಾ AIMIM ಜೊತೆಗಿನ ಯಾವುದೇ ಮೈತ್ರಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತಿದ್ದೇನೆ. ಯಾವುದೇ ಸ್ಥಳೀಯ ನಾಯಕರು ಸ್ವಂತವಾಗಿ ಅಂತಹ ನಿರ್ಧಾರವನ್ನು ತೆಗೆದುಕೊಂಡಿದ್ದರೆ, ಅದು ಶಿಸ್ತು ಉಲ್ಲಂಘನೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದು ಫಡ್ನವೀಸ್ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
Advertisement