

ನವದೆಹಲಿ: ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮಗಳು ರೋಹಿಣಿ ಆಚಾರ್ಯ ಅವರ ಹಿರಿಯ ಮಗ ಆದಿತ್ಯ ಸಿಂಗಪುರದಲ್ಲಿ ಮೂಲಭೂತ ಸೇನಾ ತರಬೇತಿ ಪಡೆಯಲು ದಾಖಲಾಗಿದ್ದಾರೆ.
ಈ ಬಗ್ಗೆ ರೋಹಿಣಿ ಆಚಾರ್ಯ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇಂದು ನನ್ನ ಹೃದಯ ಹೆಮ್ಮೆಯಿಂದ ತುಂಬಿದೆ. ಪದವಿ ಪೂರ್ವ ಶಿಕ್ಷಣ ಮುಗಿಸಿದ ನಂತರ ನನ್ನ ಹಿರಿಯ ಮಗ ಆದಿತ್ಯ ಕೇವಲ 18 ವರ್ಷ ವಯಸ್ಸಿನಲ್ಲಿ ಎರಡು ವರ್ಷಗಳ ಸೇನಾ ತರಬೇತಿ ಆರಂಭಿಸಿದ್ದಾನೆ ಎಂದು ಅವರು ಬರೆದುಕೊಂಡಿದ್ದಾರೆ. ಆದಿತ್ಯ.... ನೀನು ಧೈರ್ಯಶಾಲಿ ಮತ್ತು ಶಿಸ್ತುಬದ್ಧ ವ್ಯಕ್ತಿ. ಅಲ್ಲಿ ಹೋಗಿ ಒಳ್ಳೆಯ ಕೆಲಸಗಳನ್ನು ಮಾಡು. ಯೋಧರು ಜೀವನದ ಕಠಿಣ ಯುದ್ಧಗಳಿಂದ ರೂಪಿಸಲ್ಪಟ್ಟಿದ್ದಾರೆ ಎಂಬುದನ್ನು ಮರೆಯದಿರು. ನಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಯಾವಾಗಲೂ ನಿನ್ನೊಂದಿಗೆ ಇರುತ್ತದೆ ಎಂದು ಹೇಳಿದ್ದಾರೆ.
ಸಿಂಗಪುರದಲ್ಲಿ ‘ರಾಷ್ಟ್ರೀಯ ಸೇವೆ’ ಯೋಜನೆಯಡಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದ್ದು, ಸೇನಾ ತರಬೇತಿ ಅವುಗಳಲ್ಲಿ ಒಂದಾಗಿದೆ. ಯುವಕರಲ್ಲಿ ಶಿಸ್ತು, ದೈಹಿಕ ಸದೃಢತೆ, ನಾಯಕತ್ವ ಕೌಶಲಗಳನ್ನು ಬೆಳೆಸುವ ಉದ್ದೇಶಗಳನ್ನು ಇದು ಹೊಂದಿದೆ. ತರಬೇತಿ ವೇಳೆ ಮಿಲಿಟರಿ ಡ್ರಿಲ್, ಶಸ್ತ್ರಾಸ್ತ್ರ ನಿರ್ವಹಣೆಯ ಮೂಲಭೂತ ಅಂಶಗಳು ಸೇರಿದಂತೆ ಹಲವು ರೀತಿಯ ತರಬೇತಿ ನೀಡಲಾಗುತ್ತದೆ.
ಆದಿತ್ಯ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ಅವರ ಒಂಬತ್ತು ಮಕ್ಕಳಲ್ಲಿ ಎರಡನೇ ಮಗಳು ರೋಹಿಣಿ ಆಚಾರ್ಯ ಅವರ ಹಿರಿಯ ಮಗ. ಅವರ ತಂದೆ ಸಮರೇಶ್ ಸಿಂಗ್, ಮಾಜಿ ಆದಾಯ ತೆರಿಗೆ ಆಯುಕ್ತ-ಶ್ರೇಣಿಯ ಅಧಿಕಾರಿ ರಾವ್ ರಣವಿಜಯ್ ಸಿಂಗ್ ಅವರ ಮಗ. ಆದಿತ್ಯ ಸಿಂಗಾಪುರದಲ್ಲಿ ತರಬೇತಿ ಪಡೆಯುವ ಮೊದಲು ತನ್ನ ಪದವಿ ಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಅವರಿಗೆ ಇಬ್ಬರು ಕಿರಿಯ ಸಹೋದರರಿದ್ದಾರೆ.
Advertisement