

ಚೆನ್ನೈ: 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟಕ್ಕೆ ಸೇರುವ ನಿರ್ಧಾರವನ್ನು ಪಟ್ಟಾಳಿ ಮಕ್ಕಳ್ ಕಚ್ಚಿ(ಪಿಎಂಕೆ) ಬುಧವಾರ ಪ್ರಕಟಿಸಿದೆ.
ಇಂದು ಚೆನ್ನೈನ ಗ್ರೀನ್‌ವೇಸ್ ರಸ್ತೆಯಲ್ಲಿರುವ ಇಪಿಎಸ್ ಅವರ ನಿವಾಸದಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಪಿಎಂಕೆ ಅಧ್ಯಕ್ಷ ಡಾ. ಅನ್ಬುಮಣಿ ರಾಮದಾಸ್ ಅವರು ಜಂಟಿಯಾಗಿ ಈ ಘೋಷಣೆ ಮಾಡಿದ್ದಾರೆ.
ಮೈತ್ರಿ ವಿಧಾನಗಳ ಕುರಿತು ನಾಲ್ಕು ಗೋಡೆ ಮಧ್ಯ ಚರ್ಚಿಸಿದ ನಂತರ, ಇಬ್ಬರೂ ನಾಯಕರು ಜಂಟಿಯಾಗಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಪಿಎಂಕೆ ವಿರೋಧ ಪಕ್ಷಗಳೊಂದಿಗೆ ಅಧಿಕೃತವಾಗಿ ಕೈಜೋಡಿಸುತ್ತಿದೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಪಳನಿಸ್ವಾಮಿ, ಎಐಎಡಿಎಂಕೆ ಮತ್ತು ಪಿಎಂಕೆ ಎರಡೂ ಪಕ್ಷಗಳ ನಾಯಕರು, ಕಾರ್ಯಕರ್ತರು ಮತ್ತು ಬೆಂಬಲಿಗರ ಆಶಯಗಳಿಗೆ ಅನುಗುಣವಾಗಿ ಈ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. "ಇದು ಗೆಲುವಿನ ಮೈತ್ರಿಕೂಟ. ಜನವಿರೋಧಿ ಡಿಎಂಕೆ ಸರ್ಕಾರವನ್ನು ಸೋಲಿಸುವುದು ಮತ್ತು ತಮಿಳುನಾಡಿನ ಜನರಿಗೆ ಕಲ್ಯಾಣ-ಆಧಾರಿತ ಆಡಳಿತವನ್ನು ನೀಡುವ ಬಲಿಷ್ಠ ಸರ್ಕಾರವನ್ನು ರಚಿಸುವುದು ನಮ್ಮ ಸಾಮೂಹಿಕ ಗುರಿಯಾಗಿದೆ" ಎಂದು ಅವರು ಹೇಳಿದರು.
ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟವು 234 ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಪಾಲು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ ಮತ್ತು ಸ್ಪಷ್ಟ ಜನಾದೇಶದೊಂದಿಗೆ ಅಧಿಕಾರಕ್ಕೆ ಮರಳುತ್ತದೆ ಎಂದು ಇಪಿಎಸ್ ವಿಶ್ವಾಸ ವ್ಯಕ್ತಪಡಿಸಿದರು.
ಸೀಟು ಹಂಚಿಕೆ ಚರ್ಚೆಗಳು ಅಂತಿಮಗೊಂಡಿವೆ ಎಂದು ಹೇಳಿದ ಅವರು, ವಿವರಗಳನ್ನು ನಂತರ ಪ್ರಕಟಿಸಲಾಗುವುದು ಎಂದು ತಿಳಿಸಿದರು.
Advertisement