

ಚೆನ್ನೈ: ನಟ ರಾಜಕಾರಣಿ ವಿಜಯ್ ಅವರ ಬಹುನಿರೀಕ್ಷಿತ ಚಿತ್ರ ಜನ ನಾಯಗನ್ ನಿರ್ಮಾಪಕರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಮದ್ರಾಸ್ ಹೈಕೋರ್ಟ್ ಶುಕ್ರವಾರ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (CBFC) ಚಿತ್ರಕ್ಕೆ ಯುಎ 16+ ಸೆನ್ಸಾರ್ ಸರ್ಟಿಫಿಕೇಟ್ ನ್ನು ತಕ್ಷಣವೇ ನೀಡುವಂತೆ ಆದೇಶ ನೀಡಿದೆ. ಚಲನಚಿತ್ರ ಮಂಡಳಿಯು ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದೆ.
ಕೆವಿಎನ್ ಪ್ರೊಡಕ್ಷನ್ಸ್‌ನ ಕೆ ವೆಂಕಟ್ ನಾರಾಯಣ ಅವರು ಸಲ್ಲಿಸಿದ ಅರ್ಜಿಯ ಮೇರೆಗೆ ನ್ಯಾಯಮೂರ್ತಿ ಪಿ ಟಿ ಆಶಾ ಈ ಆದೇಶವನ್ನು ಹೊರಡಿಸಿದರು. ಇದು ಸಿಬಿಎಫ್‌ಸಿ ಅಧ್ಯಕ್ಷರು ಕೆಲವು ಕಡಿತಗಳಿಗೆ ಒಳಪಟ್ಟು ಯುಎ ಪ್ರಮಾಣೀಕರಣಕ್ಕಾಗಿ ಅನುಮತಿ ನೀಡಿದ ನಂತರ ಪರಿಷ್ಕರಣಾ ಸಮಿತಿಗೆ ಉಲ್ಲೇಖಿಸುವ ನಿರ್ಧಾರವನ್ನು ಪ್ರಶ್ನಿಸಿತು.
ಜನವರಿ 6 ರಂದು ಸಿಬಿಎಫ್‌ಸಿ ಅಧ್ಯಕ್ಷರು ಬರೆದ ಪತ್ರವನ್ನು ನ್ಯಾಯಾಲಯವು ರದ್ದುಗೊಳಿಸಿತು. ಅದರ ಮೂಲಕ ಚಿತ್ರವನ್ನು ಹೆಚ್ಚಿನ ಪರಿಶೀಲನೆಗೆ ಪರಿಷ್ಕರಣಾ ಸಮಿತಿಗೆ ಉಲ್ಲೇಖಿಸಲಾಗಿದೆ. ಅಧ್ಯಕ್ಷರು ಅಧಿಕಾರ ವ್ಯಾಪ್ತಿಗೆ ಮೀರಿ ವರ್ತಿಸಿದ್ದಾರೆ ಎಂದು ತೀರ್ಪು ನೀಡಿತು.
ಚಿತ್ರ ಬಿಡುಗಡೆ ವಿಳಂಬದ ಬಗ್ಗೆ ವಿಜಯ್ ಅವರ ಅಭಿಮಾನಿಗಳಲ್ಲಿ ಆಕ್ರೋಶ, ಅಸಮಾಧಾನ ಹೆಚ್ಚಾಗುತ್ತಿದ್ದು, ನ್ಯಾಯಾಧೀಶರು ಸಿಬಿಎಫ್‌ಸಿಗೆ ತಕ್ಷಣವೇ ಪ್ರಮಾಣಪತ್ರವನ್ನು ನೀಡುವಂತೆ ಆದೇಶಿಸಿದರು.
ನಿರ್ಮಾಪಕರು ಮೂಲತಃ ಚಿತ್ರದ ಬಿಡುಗಡೆಯನ್ನು ಇಂದು ನಿಗದಿಪಡಿಸಿದ್ದರು. ಆದರೆ ನಂತರ ಸರ್ಟಿಫಿಕೇಟ್ ಸಮಸ್ಯೆಯಿಂದ ಮುಂದೂಡಲ್ಪಟ್ಟಿತ್ತು.
ಸಿಬಿಎಫ್‌ಸಿ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎ ಆರ್ ಎಲ್ ಸುಂದರೇಶನ್, ಪರೀಕ್ಷಾ ಸಮಿತಿಯು ನಿರ್ಧಾರ ತೆಗೆದುಕೊಂಡ ನಂತರವೂ ಚಿತ್ರವನ್ನು ಪರಿಷ್ಕರಣಾ ಸಮಿತಿಗೆ ಉಲ್ಲೇಖಿಸಲು ಅಧ್ಯಕ್ಷರು ತಮ್ಮ ಅಧಿಕಾರದಲ್ಲಿದ್ದಾರೆ ಎಂದರು. ಪರೀಕ್ಷಾ ಸಮಿತಿಯ ಸದಸ್ಯರಲ್ಲಿ ಒಬ್ಬರು ಸಲ್ಲಿಸಿದ್ದಾರೆ ಎನ್ನಲಾದ ದೂರಿನ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಅಧ್ಯಕ್ಷರು ಪರೀಕ್ಷಾ ಸಮಿತಿಯ ನಿರ್ಧಾರಕ್ಕೆ ಬದ್ಧರಲ್ಲ. ಚಲನಚಿತ್ರವನ್ನು ಹೆಚ್ಚಿನ ಪರಿಶೀಲನೆಗೆ ಉಲ್ಲೇಖಿಸಲು ಅಧಿಕಾರ ಹೊಂದಿದ್ದಾರೆ ಎಂದು ಎಎಸ್‌ಜಿ ವಾದಿಸಿದರು.
ಬಿಡುಗಡೆ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂಬ ಕಾರಣಕ್ಕಾಗಿ ಅರ್ಜಿದಾರರು ಮಂಡಳಿಯನ್ನು ತ್ವರಿತ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಅವರು ವಾದಿಸಿದರು.
ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಸತೀಶ್ ಪರಾಸರನ್, ಐದು ಸದಸ್ಯರ ಪರೀಕ್ಷಾ ಸಮಿತಿಯಲ್ಲಿ ಒಬ್ಬ ಸದಸ್ಯರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರೆ, ನಿರ್ಧಾರವು 4:1 ಬಹುಮತದ ತೀರ್ಪಿನಂತೆ ಇರಬೇಕಿತ್ತು, ಭಿನ್ನಾಭಿಪ್ರಾಯ ಹೊಂದಿರುವ ಸದಸ್ಯರು ದೂರು ನೀಡಬಾರದು ಎಂದು ಪ್ರತಿವಾದಿಸಿದರು.
ಸಮಿತಿಯ ಸದಸ್ಯರೊಬ್ಬರು ನೀಡಿದ ದೂರಿನ ನೆಪದಲ್ಲಿ ಅಧ್ಯಕ್ಷರು ಪ್ರಮಾಣೀಕರಣ ಪ್ರಕ್ರಿಯೆಯನ್ನು ಮತ್ತೆ ತೆರೆಯಲು ಮತ್ತು ಚಿತ್ರವನ್ನು ಪರಿಷ್ಕರಣಾ ಸಮಿತಿಗೆ ಉಲ್ಲೇಖಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.
Advertisement