

ಬಿಷ್ಣುಪುರ: ಬಿಷ್ಣುಪುರ ಜಿಲ್ಲೆಯ ಪೆಟ್ರೋಲ್ ಪಂಪ್ ವೊಂದರ ಮೇಲೆ ಬಾಂಬ್ ದಾಳಿ ನಡೆದ ಎರಡು ದಿನಗಳ ನಂತರ, ಮಣಿಪುರ ಪೆಟ್ರೋಲಿಯಂ ಡೀಲರ್ಸ್ ಫ್ರಾಟರ್ನಿಟಿ(MPDF) ಶನಿವಾರದಿಂದ ತನ್ನ ಬೇಡಿಕೆಗಳನ್ನು ಈಡೇರಿಸುವವರೆಗೆ "ಕಣಿವೆ ಪ್ರದೇಶ ಮತ್ತು ಅದರ ಪೆರಿಫೆರಲ್‌ಗಳ" ಎಲ್ಲಾ ಪೆಟ್ರೋಲ್ ಪಂಪ್‌ಗಳನ್ನು ಅನಿರ್ದಿಷ್ಟಾವಧಿಗೆ ಬಂದ್ ಮಾಡುವುದಾಗಿ ಘೋಷಿಸಿದೆ.
ಈ ಸಂಬಂಧ ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರಿಗೆ ಪತ್ರ ಬರೆದಿರುವ MPDF, "ರಾಜ್ಯ ಅಧಿಕಾರಿಗಳು ಪೆಟ್ರೋಲ್ ಪಂಪ್/ಡೀಲರ್‌ಗಳ ಸುರಕ್ಷತೆಯ ಬಗ್ಗೆ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದರೂ, ಗುರುವಾರ ರಾತ್ರಿ ಸಂಭವಿಸಿದ ಬಾಂಬ್ ಸ್ಫೋಟ ನಾವು ಇನ್ನೂ ತೀವ್ರ ಬೆದರಿಕೆಗಳನ್ನು ಎದುರಿಸುತ್ತಿದ್ದೇವೆ ಎಂದು ಸಾಬೀತುಪಡಿಸಿದೆ" ಎಂದು ತಿಳಿಸಿದೆ.
ಇಂಧನ ಕೇಂದ್ರದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಿಂದ ಉಂಟಾದ ಹಾನಿಗೆ ಪರಿಹಾರ ಕೋರುತ್ತಾ, "ತಕ್ಷಣದ ಗಮನ ಮತ್ತು ಸೌಹಾರ್ದಯುತ ಪರಿಹಾರ" ದೊರೆಯುವವರೆಗೆ ಕಣಿವೆ ಪ್ರದೇಶಗಳು ಮತ್ತು ಅದರ ಹೊರವಲಯದಲ್ಲಿರುವ ಎಲ್ಲಾ ಪೆಟ್ರೋಲ್ ಪಂಪ್‌ಗಳನ್ನು ಶನಿವಾರದಿಂದ ಅನಿರ್ದಿಷ್ಟಾವಧಿಗೆ ಬಂದ್ ಮಾಡಲು ಸರ್ವಾನುಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು MPDF ತಿಳಿಸಿದೆ.
ಗುರುವಾರ ರಾತ್ರಿ, ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್‌ನಲ್ಲಿರುವ ಇಂಧನ ಕೇಂದ್ರದ ಮೇಲೆ ಅಪರಿಚಿತ ದುಷ್ಕರ್ಮಿಗಳು ಬಾಂಬ್ ಎಸೆದಿದ್ದು, ಸ್ಫೋಟ ಸಂಭವಿಸಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ.
ಪೆಟ್ರೋಲ್ ಪಂಪ್‌ಗಳು, ಡೀಲರ್‌ಗಳು ಮತ್ತು ಸಿಬ್ಬಂದಿಗಳ ಭದ್ರತೆಯನ್ನು ಹೆಚ್ಚಿಸುವ ಮೂಲಕ ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕೆಂದು ಎಂಪಿಡಿಎಫ್ ಸರ್ಕಾರವನ್ನು ಒತ್ತಾಯಿಸಿದೆ.
Advertisement