

ಅಜ್ಮೀರ್: ರಾಜಸ್ಥಾನದ ಪ್ರಸಿದ್ಧ ಅಜ್ಮೀರ್ ದರ್ಗಾ ಮೂಲತಃ "ಶಿವನ ದೇವಸ್ಥಾನವಾಗಿತ್ತು ಎಂದು ಪ್ರತಿಪಾದಿಸುವ ಅರ್ಜಿಯೊಂದನ್ನು ಸೋಮವಾರ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಈ ಸಂಬಂಧ ಬಲಪಂಥೀಯ ಸಂಘಟನೆ ಮಹಾರಾಣಾ ಪ್ರತಾಪ್ ಸೇನೆಯ ರಾಷ್ಟ್ರೀಯ ಅಧ್ಯಕ್ಷ ರಾಜವರ್ಧನ್ ಸಿಂಗ್ ಪರ್ಮಾರ್ ಅವರು ಅಜ್ಮೀರ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಅಲ್ಲಿ ಪುರಾತತ್ವ ಸಮೀಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಅಜ್ಮೀರ್ ದರ್ಗಾ ಶಿವನ ದೇವಸ್ಥಾನವಾಗಿತ್ತು. ನಂತರ ಅದನ್ನು ದರ್ಗಾ ಮಾಡಲಾಯಿತು. ಈ ವಿವಾದದ ಬಗ್ಗೆ ಬಹಳ ಹಿಂದಿನಿಂದಲೂ ಹೋರಾಡುತ್ತಿದ್ದೇನೆ. ಈ ಹಿಂದೆ ರಾಷ್ಟ್ರಪತಿಗಳಿಗೂ ಮನವಿ ಸಲ್ಲಿಸಲಾಗಿತ್ತು. ಅದನ್ನು ರಾಜಸ್ಥಾನದ ಮುಖ್ಯ ಕಾರ್ಯದರ್ಶಿಗೆ ರವಾನಿಸಲಾಗಿದೆ" ಎಂದು ಅವರು ಹೇಳಿದ್ದಾರೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸರ್ವೇ ನಡೆಸಬೇಕೆಂದು ಮನವಿಯಲ್ಲಿ ಒತ್ತಾಯಿಸಿರುವುದಾಗಿ ಅವರು ತಿಳಿಸಿದ್ದಾರೆ.
ಇಂದು ಅಜ್ಮೀರ್‌ನ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು ಹಿರಿಯ ವಕೀಲ ಎ ಪಿ ಸಿಂಗ್ ಹೇಳಿದ್ದಾರೆ. ಈ ದರ್ಗಾ ಶಿವನಿಗೆ ಸಮರ್ಪಿತವಾದ ದೇವಾಲಯವಾಗಿದ್ದು, ಪ್ರಾಚೀನ ಕಾಲದಿಂದಲೂ ಇದೆ" ಎಂದು ಅವರು ಪ್ರತಿಪಾದಿಸಿದ್ದಾರೆ.
2024 ರಲ್ಲಿ ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಕೂಡ ಅರ್ಜಿಯನ್ನು ಸಲ್ಲಿಸಿದ್ದರು. ಅದೇ ರೀತಿ ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ಅವರ ದರ್ಗಾವನ್ನು ದೇವಾಲಯದ ಮೇಲೆ ನಿರ್ಮಿಸಲಾಗಿದ್ದು, ದರ್ಗಾವನ್ನು ಹಿಂದೂ ದೇವಾಲಯ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
Advertisement