

ಕೋಲ್ಕತ್ತಾ: ಈ ತಿಂಗಳ ಆರಂಭದಲ್ಲಿ ಕೋಲ್ಕತ್ತಾದ ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ನಡೆಸಿದ ದಾಳಿಗೆ ಸಂಬಂಧಿಸಿದಂತೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಲ್ಲಿಸಿದ್ದ ಅರ್ಜಿಯನ್ನು ಕಲ್ಕತ್ತಾ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಜನವರಿ 8 ರಂದು ನಡೆದ ದಾಳಿಯ ಸಮಯದಲ್ಲಿ ಇಡಿ ವಶಪಡಿಸಿಕೊಂಡಿರಬಹುದಾದ ವೈಯಕ್ತಿಕ ಮತ್ತು ರಾಜಕೀಯ ಡೇಟಾ ಸಂರಕ್ಷಣೆಗೆ ಆದೇಶ ನೀಡುವಂತೆ ಕೋರಿ ಟಿಎಂಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.
ಇಡಿ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು, ನ್ಯಾಯಾಲಯದ ಮುಂದೆ ಕೇಂದ್ರ ತನಿಖಾ ಸಂಸ್ಥೆ ದಾಳಿ ನಡೆಸಿದ ಎರಡೂ ಸ್ಥಳಗಳಲ್ಲಿ ಏನನ್ನೂ ವಶಪಡಿಸಿಕೊಂಡಿಲ್ಲ ಎಂದು ಹೇಳಿದರು.
ಕೇಂದ್ರ ತನಿಖಾ ಸಂಸ್ಥೆಯ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಮೂರ್ತಿ ಸುವ್ರಾ ಘೋಷ್ ಅವರು, ಟಿಎಂ ಅರ್ಜಿಯನ್ನು ವಜಾಗೊಳಿಸಿದರು ಮತ್ತು ಟಿಎಂಸಿಯ ಮನವಿಯನ್ನು ಇತ್ಯರ್ಥಪಡಿಸಲು ಇನ್ನೇನೂ ಉಳಿದಿಲ್ಲ ಎಂದು ಹೇಳಿದರು.
"ಐ-ಪ್ಯಾಕ್ ಕಚೇರಿ ಅಥವಾ ಅದರ ಮುಖ್ಯಸ್ಥರ ನಿವಾಸದಿಂದ ಏನನ್ನೂ ವಶಪಡಿಸಿಕೊಂಡಿಲ್ಲ ಎಂಬ ಇಡಿ ವಾದವನ್ನು ಗಮನದಲ್ಲಿಟ್ಟುಕೊಂಡು ಈ ಅರ್ಜಿಯನ್ನು ವಿಲೇವಾರಿ ಮಾಡಲಾಗಿದೆ" ಎಂದು ನ್ಯಾಯಾಲಯ ಹೇಳಿದೆ.
ಜನವರಿ 8 ರಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್ ಕಚೇರಿ ಮತ್ತು ದಕ್ಷಿಣ ಕೋಲ್ಕತ್ತಾದ ಲೌಡನ್ ಸ್ಟ್ರೀಟ್‌ನಲ್ಲಿರುವ ಅದರ ಮುಖ್ಯಸ್ಥರ ನಿವಾಸದ ಮೇಲೆ ನಡೆದ ದಾಳಿಯ ಸಮಯದಲ್ಲಿ ಭೇಟಿ ನೀಡಿದ ಘಟನೆಯ ಬಗ್ಗೆ ಸಿಬಿಐ ತನಿಖೆ ಕೋರಿ ಇಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ಮುಂದೂಡಿದೆ.
Advertisement