

ಮಹಾರಾಷ್ಟ್ರ ಮಹಾನಗರ ಪಾಲಿಕೆ ಚುನಾವಣೆಯ ಸಮಯದಲ್ಲಿ ಅಳಿಸಬಹುದಾದ ಶಾಯಿಯನ್ನು ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕಾಂಗ್ರೆಸ್ ನಾಯಕ, ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಜಾಪ್ರಭುತ್ವದ ಮೇಲಿನ ಸಾರ್ವಜನಿಕ ನಂಬಿಕೆ ಕುಸಿದಿದೆ ಎಂದು ಟೀಕಿಸಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಅವರು, ವೋಟ್ ಚೋರಿಯನ್ನು ರಾಷ್ಟ್ರವಿರೋಧಿ ಕೃತ್ಯ ಎಂದು ಕರೆದರು. ಚುನಾವಣಾ ಆಯೋಗವು ನಾಗರಿಕರನ್ನು ಗೊಂದಲಕ್ಕೀಡುಮಾಡುತ್ತಿದೆ ಎಂದು ಆರೋಪಿಸಿದರು.
ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗ (SEC) ನಿನ್ನೆ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಸಮಯದಲ್ಲಿ ಅಳಿಸಬಹುದಾದ ಶಾಯಿಯನ್ನು ಬಳಸಿತ್ತು ಎಂಬ ದೂರುಗಳ ತನಿಖೆಗೆ ಆದೇಶಿಸಿದೆ. ಈ ವಿಷಯದ ಬಗ್ಗೆ ಗೊಂದಲ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಚುನಾವಣಾ ಆಯೋಗ ಎಚ್ಚರಿಸಿದೆ.
ಶಿವಸೇನೆ (UBT) ಮುಖ್ಯಸ್ಥ ಉದ್ಧವ್ ಠಾಕ್ರೆ ಆರೋಪ ಮಾಡಿದ್ದರು. ರಾಜ್ಯ ಚುನಾವಣಾ ಆಯುಕ್ತ ದಿನೇಶ್ ವಾಘ್ಮೋರೆ ಆಡಳಿತಾರೂಢ ಬಿಜೆಪಿ ನೇತೃತ್ವದ ಮೈತ್ರಿಕೂಟದ ಪರವಾಗಿದ್ದಾರೆ, ಅವರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.
ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ವಾಘ್ಮೋರೆ ತನಿಖೆಗೆ ಆದೇಶ ನೀಡಿದರು. ಅಸಿಟೋನ್ ಅಥವಾ ಉಗುರು ಬಣ್ಣವನ್ನು ಬಳಸಿ ಶಾಯಿಯನ್ನು ತೆಗೆಯಬಹುದು ಎಂಬ ಹೇಳಿಕೆಗಳು ಸುಳ್ಳು. ಶಾಯಿಯನ್ನು ತೆಗೆದುಹಾಕಲು ಅಥವಾ ಮತದಾರರಲ್ಲಿ ತಪ್ಪು ಮಾಹಿತಿಯನ್ನು ಹರಡಲು ಪ್ರಯತ್ನಿಸಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Advertisement